ಹುಬ್ಬಳ್ಳಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ನಷ್ಟವಾಗಿದ್ದು, ಮನೆ ಹಾಗೂ ಬೆಳೆಗಳಿಗೆ ಹಾನಿಯಾಗಿದೆ. ಜಾನುವಾರುಗಳು ಮೃತಪಟ್ಟಿವೆ. ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅಧಿಕಾರಿಗಳಿಗೆ ಸೂಚಿಸಿದರು.
ಬೆಣ್ಣಿಹಳ್ಳ ಪ್ರವಾಹಕ್ಕೆ ಸಿಲುಕಿದ ನೂಲ್ವಿ ಮತ್ತು ದ್ಯಾವನೂರ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿದ ಸಚಿವರು, ಸಂತ್ರಸ್ತರ ಅಹವಾಲು ಸ್ವೀಕರಿಸಿದರು.
ಅತಿವೃಷ್ಟಿಯಿಂದ ಸಂಪೂರ್ಣ ಮನೆ ಹಾನಿಗೊಳಗಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದ್ಯಾವನೂರು ಗ್ರಾಮದ ರುದ್ರಪ್ಪ ಅರಳಿಕಟ್ಟಿ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಂತರ ಅಧಿಕಾರಿಗಳಿಗೆ ಕುಂದಗೋಳ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸಂಬಂಧಿಸಿದ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತ್ವರಿತವಾಗಿ ನೀಡುವಂತೆ ಸೂಚಿಸಿದರು.
ಪ್ರಕೃತಿ ವಿಕೋಪ ನಿಧಿಯಲ್ಲಿ ಸ್ವೀಕೃತವಾದ 4,10,45,567 ರೂ.ಗಳಲ್ಲಿ ಮಾನವ ಹಾಗೂ ಜಾನುವಾರು ಪ್ರಾಣ ಹಾನಿ, ಬಟ್ಟೆ ಬರೆ, ದಿನಬಳಕೆ ವಸ್ತುಗಳ ಸೇರಿದಂತೆ ಮನೆಗಳ ಹಾನಿಯ ಪ್ರಮಾಣ ಆಧರಿಸಿ, ಸಂತ್ರಸ್ತರ ಖಾತೆಗೆ ನೇರವಾಗಿ ಪರಿಹಾರ ಧನವನ್ನು ಆರ್‌ಟಿಜಿಎಸ್ ಮಾಡಲಾಗಿದೆ. ಮೊದಲ ಹಂತದಲ್ಲಿ 272 ಹಾಗೂ 2ನೇ ಹಂತದಲ್ಲಿ 832 ಪ್ರಕರಣಗಳ ಸಂತ್ರಸ್ತರಿಗೆ ಒಟ್ಟು 3,57,50,317ರೂ. ಪರಿಹಾರಧನ ವಿತರಿಸಲಾಗಿದೆ. ಮೇವು, ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಶೀಘ್ರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸಂತ್ರಸ್ತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ಶಾಸಕಿ ಕುಸುಮಾವತಿ ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ|ಬಿ.ಸಿ. ಸತೀಶ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ, ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮೊದಲಾದವರಿದ್ದರು.