ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚು ಹಾನಿ ಮಾಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಿಕೆ ಪ್ರಮಾಣ ಹೆಚ್ಚಳವಾಗಬೇಕು. ನಿತ್ಯ ಕನಿಷ್ಟ 10 ಸಾವಿರ ಜನರಿಗೆ ವ್ಯಾಕ್ಸಿನ್ ನೀಡಲೇಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ವ್ಯಾಕ್ಸಿನ್ ಕೊರತೆಯಾದರೆ ಜಿಲ್ಲೆಗೆ ಪೂರೈಕೆಯಾಗುವ ಪ್ರಮಾಣ ಹೆಚ್ಚಳ ಮಾಡಲಾಗುವುದು. ಮೊದಲ ಡೋಸ್ ನಂತರ ಎರಡನೇ ಡೋಸ್ ಪಡೆಯಲು ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ಕಳುಹಿಸಲು ಸೂಚನೆ ನೀಡಿದರು. ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡಿಕೆ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು.
ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಿಕೆಗೆ ಕಾಲೇಜು ಕ್ಯಾಂಪಸ್‌ನಲ್ಲಿ ಉಪ ಕೇಂದ್ರ ತೆರೆದು ಲಸಿಕೆ ನೀಡಬೇಕು. ಲಸಿಕೆ ಸರಬರಾಜು ಹಾಗೂ ಹಂಚಿಕೆ ವ್ಯವಸ್ಥಿತವಾಗಿ ಯೋಜಿಸಿ ಕ್ರಮ ಕೈಗೊಳ್ಳಬೇಕು. ಲಸಿಕೆ ವೈಲ್‌ಗಳ ಪೂರೈಕೆ ಪ್ರಮಾಣ ಹೆಚ್ಚು ಅಗತ್ಯವಿದ್ದರೆ ವೈಯಕ್ತಿಕವಾಗಿ ಗಮನಹರಿಸಿ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದರು.
ಜು.30ರೊಳಗಾಗಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಬೇಕು. ತಪಾಸಣೆ ಸಂದರ್ಭದಲ್ಲಿ ಅಪೌಷ್ಟಿಕತೆ ಅಥವಾ ಗಂಭೀರ ಕಾಯಿಲೆಗಳು ಕಂಡುಬಂದರೆ ತಜ್ಞ ವೈದ್ಯರಿಂದ ವಿಶೇಷ ಚಿಕಿತ್ಸೆ ಹಾಗೂ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳು, ಕ್ಷೀರಭಾಗ್ಯ ಯೋಜನೆ ಸೌಲಭ್ಯಗಳು, ಅಪೌಷ್ಟಿಕತೆ ನಿವಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರೋಟಿನ್ ವಿಟ್ಯಾಮಿನ್ ಸಪ್ಲಿಮೆಂಟ್ರಿಗಳು, ಔಷ ಧ ನೀಡುವ ಮೂಲಕ ಕೋವಿಡ್ ಸೋಂಕನ್ನು ಮಕ್ಕಳು ಮೆಟ್ಟಿ ನಿಲ್ಲುವಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಮಕ್ಕಳೊಂದಿಗೆ ಬರುವ ಪಾಲಕರಿಗೂ ಆರೋಗ್ಯ ತಪಾಸಣೆ ನಡೆಸಬೇಕು. ಪ್ರತಿದಿನ ವಾಟ್ಸ್ ಆ್ಯಪ್‌ಗೆ ಮಾಹಿತಿ ರವಾನಿಸುವಂತೆ ಸೂಚನೆ ನೀಡಿದರು.
ಮಕ್ಕಳನ್ನು ಕೋವಿಡ್‌ನಿಂದ ರಕ್ಷಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಸೌಲಭ್ಯ ಹೆಚ್ಚಳ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಸ್ತುತವಿರುವ ಮಕ್ಕಳ ಹಾಸಿಗೆ ಸಂಖ್ಯೆ ಹೆಚ್ಚಳ ಮಾಡಬೇಕು. ಜಿಲ್ಲಾಸ್ಪತ್ರೆಯಲ್ಲಿ 30 ಹಾಸಿಗೆ ಹಾಗೂ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಟ 10 ಹಾಸಿಗೆಗಳ ಐಸಿಯು ಸಹಿತ ಮಕ್ಕಳ ವಿಶೇಷ ಕೋವಿಡ್ ವಾರ್ಡ್ ತೆರೆಯಬೇಕು. ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಬೇಕು. ಕೋವಿಡ್ ಪಾಸಿಟಿವ್ ಪ್ರಮಾಣ ಕಡಿಮೆಯಾಗಿರುವ ಕಾರಣ ಮುಚ್ಚಲಾಗಿರುವ ಕೋವಿಡ್ ಆರೈಕೆ ಕೇಂದ್ರ ಕಾಯ್ದಿರಿಸಬೇಕು. ಅಗತ್ಯಬಿದ್ದರೆ ಮಕ್ಕಳು ಮತ್ತು ಮಕ್ಕಳ ಪಾಲಕರಿಗಾಗಿ ಈ ಕೇಂದ್ರ ಬಳಸಿಕೊಳ್ಳಲು ಅ ಧಿಕಾರಿಗಳಿಗೆ ಸೂಚನೆ ನೀಡಿದರು. ಆ.30ರೊಳಗಾಗಿ ಜಿಲ್ಲೆಯಲ್ಲಿ ಆಕ್ಸಿಜನ್ ಜನರೇಟ್ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿ ಸೇರಿದಂತೆ ರಾಜ್ಯ ವಿಪತ್ತು ನಿರ್ವಹಣಾ ಅನುದಾನದಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಈಗ 48 ವೆಂಟಿಲೇಟರ್ ಲಭ್ಯವಿದ್ದು, ಸರ್ಕಾರ ಹಾಗೂ ದಾನಿಗಳಿಂದ ಪಡೆದು ಮೂರನೇ ಅಲೆಯ ಮುನ್ನ ಆಗಸ್ಟ್ ಅಂತ್ಯದೊಳಗೆ 100 ವೆಂಟಿಲೇಟರ್ ಪಡೆಯುವ ಗುರಿ ಹೊಂದಲಾಗಿದೆ.
ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 135 ಆಕ್ಸಿಜನ್ ಕಾನ್ಸಂಟ್ರೇಟರ್ ಗಳಿದ್ದು, ಇವುಗಳ ಪ್ರಮಾಣ ಹೆಚ್ಚಿಗೆ ಮಾಡಲು ಕ್ರಮ ವಹಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಹೆಚ್ಚಳವಾಗಿದೆ. ಯಾವ ಕಾರಣಕ್ಕಾಗಿ ಸಾವು ಸಂಭವಿಸಿದೆ ಎಂಬುವುದನ್ನು ಆಡಿಟ್ ಮಾಡಲು ರಾಜ್ಯ ತಜ್ಞರ ತಂಡ ಜಿಲ್ಲೆಗೆ ಕಳುಹಿಸಿಕೊಡಲಾಗಿದೆ. ಈ ತಂಡ ನೀಡುವ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾಧಿ ಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾ ಕಾರಿ ಹನುಮಂತರಾಯ ಸೇರಿದಂತೆ ಇತರರಿದ್ದರು.