Advertisement

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

11:27 PM May 21, 2024 | Team Udayavani |

ಬೆಂಗಳೂರು: ಚಂದನವನಕ್ಕೆ ಆಪತ್ತೊಂದು ಎದುರಾಗಿರು ವಂತೆ ಕಾಣುತ್ತಿದೆ. ಒಳ್ಳೆಯ ಸಿನೆಮಾ ಹಾಗೂ ಸಿನೆಮಾಕ್ಕೆ ಬರುವ ಪ್ರೇಕ್ಷಕರ ಕೊರತೆಯ ಪರಿಣಾಮ ನೇರವಾಗಿ ಕರ್ನಾಟಕದ ಚಿತ್ರಮಂದಿರಗಳ ಮೇಲಾಗುತ್ತಿದೆ. ಕನ್ನಡದಲ್ಲಿ ಒಳ್ಳೆಯ ಸಿನೆಮಾಗಳು ಮೂಡಿಬರದೆ ಇದ್ದರೆ ಚಿತ್ರಮಂದಿರಗಳ ನಿರ್ವಹಣೆ ಕಷ್ಟ ಎಂಬ ಅಭಿಪ್ರಾಯವನ್ನು ಪ್ರದರ್ಶಕರು ವ್ಯಕ್ತಪಡಿಸಿದ್ದಾರೆ.

Advertisement

ಸತತ ಸೋಲುಗಳಿಂದ ಕಂಗೆಟ್ಟಿರುವ ಕನ್ನಡ ಚಿತ್ರರಂಗವನ್ನು ಸಂಕಷ್ಟದಿಂದ ಪಾರು ಮಾಡುವ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇತ್ತೀಚೆಗೆ ಸಭೆ ಸೇರಿ ಚರ್ಚಿಸಿದೆ. ಕನ್ನಡ ಚಿತ್ರರಂಗದ ಪ್ರಮುಖ ಅಂಗ ಸಂಸ್ಥೆಗಳ ಪ್ರಮುಖ ಸದಸ್ಯರು ಸಭೆ ನಡೆಸಿ¨ªಾರೆ. ಈ ವೇಳೆ ಪ್ರದರ್ಶಕರ ಸಂಘ ಸಹಿತ ಅನೇಕರಿಂದ ಚಿತ್ರಮಂದಿರಗಳ ತಾತ್ಕಾಲಿಕ ಸ್ಥಗಿತದ ಕುರಿತು ಪ್ರಸ್ತಾವ ಆಗಿದೆ ಎನ್ನಲಾಗಿದೆ.

ಈಗಾಗಲೇ ಸಿನೆಮಾಗಳ ಕೊರತೆ ಯಿಂದ ತೆಲಂಗಾಣದಲ್ಲಿ 400 ಚಿತ್ರ ಮಂದಿರಗಳನ್ನು 10 ದಿನಗಳ ಕಾಲ ಬಂದ್‌ ಮಾಡಲಾಗಿದ್ದು, ಈಗ ಕರ್ನಾಟಕದಲ್ಲೂ ಇದೇ ಮಾದರಿ ಯನ್ನು ಅನುಸರಿಸುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ.

ಸಿನೆಮಾ ಕೊರತೆಯೇ ಕಾರಣ
ಕರ್ನಾಟಕದಲ್ಲಿ 550ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿದ್ದು, ಈ ಪೈಕಿ ಈಗಾಗಲೇ 200ಕ್ಕೂ ಹೆಚ್ಚು ಚಿತ್ರಮಂದಿರಗಳು ಸಿನೆಮಾಗಳ ಕೊರತೆಯಿಂದಾಗಿ ಪ್ರದರ್ಶನ ನಿಲ್ಲಿಸಿವೆ. ಈಗ ಉಳಿದವು ಕೂಡ ಪೂರ್ಣ ಪ್ರಮಾಣದಲ್ಲಿ ಶೋ ನಡೆಸಲಾಗುತ್ತಿಲ್ಲ. ಚುನಾವಣೆ, ಐಪಿಎಲ್‌ ಜತೆಗೆ ಸ್ಟಾರ್‌ ಸಿನೆಮಾಗಳ ಕೊರತೆ ಕನ್ನಡ ಚಿತ್ರರಂಗವನ್ನು ಬಲವಾಗಿ ಕಾಡುತ್ತಿದೆ.

ಹೊಸಬರ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾದರೂ ಅವುಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇಲ್ಲ. ಈ ಕಾರಣದಿಂದಾಗಿ ಚಿತ್ರಮಂದಿರಗಳಿಗೆ ಸಿನೆಮಾಗಳಿಲ್ಲದಂತಾಗಿದೆ. ಇದ ರಿಂದ ಚಿತ್ರಮಂದಿರ ನಡೆಸುವುದು ಕಷ್ಟವಾಗಿದೆ. ಪ್ರೇಕ್ಷಕರೇ ಬಾರದಿದ್ದರೆ ಚಿತ್ರಮಂದಿರ ತೆರೆದು ಪ್ರಯೋಜನವಿಲ್ಲ. ಅದರ ಬದಲು ಚಿತ್ರರಂಗ ಪುನಶ್ಚೇತನ ಕಾಣುವ ವರೆಗೆ ಬಂದ್‌ ಮಾಡಿದರೆ ಹೇಗೆ ಎಂಬ ಯೋಚನೆ ಪ್ರದರ್ಶಕರಲ್ಲಿ ಬಂದಿದೆ.

Advertisement

ಸುಧಾರಣೆಗೆ ಪ್ರಯತ್ನ
ಇತ್ತೀಚೆಗೆ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಚಿತ್ರೋದ್ಯಮದ ಚೇತರಿಕೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ನಿರ್ಮಾಪಕರು, ವಿತರಕರು, ಪ್ರದರ್ಶಕರ ಸಹಿತ ಅನೇಕ ಅಂಗ ಸಂಸ್ಥೆಗಳ ಪ್ರಮುಖರು ಭಾಗಿಯಾಗಿದ್ದು, ಕನ್ನಡ ಚಿತ್ರರಂಗದ ಹಲವು ಅಂಗ ಸಂಸ್ಥೆಗಳ ಜತೆಗೆ ಮಾತನಾಡಬೇಕು ಮತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಚರ್ಚಿಸಲಾಗಿದೆ.

ಸ್ಟಾರ್‌ ನಟರತ್ತ ಚಿತ್ತ
ಮುಖ್ಯವಾಗಿ ಕನ್ನಡ ಚಿತ್ರರಂಗದ ಸ್ಟಾರ್‌ ನಟರು ವರ್ಷಕ್ಕೆ ಮೂರು ಸಿನೆಮಾ ಮಾಡಬೇಕು ಎಂಬ ಚರ್ಚೆ ಯಾಗಿದೆ. ಹಲವು ವರ್ಷಗಳಿಂದ ಈ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಸ್ಟಾರ್‌ಗಳು ಮಾತ್ರ ವರ್ಷಕ್ಕೊಂದು ಸಿನೆಮಾ ಕೊಡುವತ್ತಲೂ ಗಮನಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸ್ಟಾರ್‌ಗಳಿಗೆ ಮನವಿ ಮಾಡುವ ಕುರಿತು ಚರ್ಚೆಯಾಗಿದೆ. ಇದರ ಜತೆಗೆ ಚಿತ್ರರಂಗದ ರೆಗ್ಯುಲರ್‌ ನಿರ್ಮಾಪಕರು ಮತ್ತೆ ಸಿನೆಮಾ ಮಾಡಬೇಕು ಹಾಗೂ ಅದಕ್ಕೆ ಬೇಕಾದ ದಾರಿ ಹುಡುಕುವ ಕುರಿತು ಚರ್ಚಿಸಲಾಗಿದೆ. ಇದೇ ವೇಳೆ ಒಂದು ತಿಂಗಳ ಒಳಗೆ ಹಂತ ಹಂತವಾಗಿ ಚಿತ್ರರಂಗದ ಪ್ರಮುಖರ ಜತೆಗೆ ಸಭೆ ನಡೆಸುವ ನಿರ್ಧಾರ ಮಾಡಲಾಗಿದೆ. ಒಂದು ತಿಂಗಳ ತನಕ ಚಿತ್ರೋದ್ಯಮದ ಚೇತರಿಕೆಗಾಗಿ ಸಭೆಗಳನ್ನು ನಡೆಸಿ ಸಂಬಂಧಪಟ್ಟವರ ಜತೆ ಮಾತುಕತೆ ಮಾಡಲು ಮಂಡಳಿ ಮುಂದಾಗಿದೆ.

ಶತಕದಲ್ಲಿ ಸಿಗದ ಗೆಲುವು
2024ರಲ್ಲಿ ನಾಲ್ಕೂವರೆ ತಿಂಗಳು ಕಳೆದಿದೆ. ಕಳೆದ ವಾರಕ್ಕೆ (ಮೇ 17)ಕನ್ನಡ ಚಿತ್ರರಂಗದ ಈ ವರ್ಷದ ಶತಕ ಬಾರಿಸಿದೆ. ಆದರೆ ನೂರು ಸಿನೆಮಾಗಳಲ್ಲಿ ಗೆದ್ದ ಸಿನಿಮಾ ಯಾವುದು ಎಂದು ಕೇಳಿದರೆ ಥಟ್ಟನೆ ಉತ್ತರ ಹೇಳುವುದು ಕಷ್ಟ. ಏಕೆಂದರೆ ಯಾವ ಚಿತ್ರವೂ ದೊಡ್ಡ ಮಟ್ಟದ ಸಾಧನೆ ಮಾಡಿಲ್ಲ. ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಚಿತ್ರಗಳು ಗೆಲುವಿನ ಹಾದಿ ಹಿಡಿಯಲೇ ಇಲ್ಲ. ಇದು ಚಿತ್ರೋದ್ಯಮದ ಬಿಕ್ಕಟ್ಟಿಗೆ ಕಾರಣವಾಗಿದ್ದು ಸುಳ್ಳಲ್ಲ. ಸತತ ಸಿನೆಮಾಗಳ ಸೋಲು ಕಂಡ ನಿರ್ಮಾಪಕರು ತಮ್ಮ ಸಿನೆಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಚಿತ್ರರಂಗದ ಪುನಶ್ಚೇತನಕ್ಕೆ ಪ್ರಯತ್ನಿಸುತ್ತಿದ್ದೇವೆ. ಇದು ಚಿತ್ರರಂಗದ ಅಳಿವು-ಉಳಿವಿನ ಪ್ರಶ್ನೆ. ನಮ್ಮ ಚಿತ್ರರಂಗದ ಕಲಾವಿದರಿಂದ ಹಿಡಿದು ಪ್ರತಿಯೊಬ್ಬರೂ ಈ ಬಾರಿ ಸಹಕರಿಸಲೇಬೇಕು. ಏಕೆಂದರೆ ಸಿನೆಮಾ ಯಾವುದೇ ಒಂದು ಅಂಗ ಸಂಸ್ಥೆಯಿಂದ ನಡೆಯುತ್ತಿಲ್ಲ. ಎಲ್ಲರೂ ಒಟ್ಟಾಗಿ ನಡೆದರೆ ಸಿನೆಮಾ ಹಾಗೂ ಸಿನೆಮಾ ಮಂದಿಯ ಬದುಕು. ಈ ನಿಟ್ಟಿನಲ್ಲಿ ಮಂಡಳಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಿದೆ. ಮುಂದಿನ ದಿನಗಳಲ್ಲಿ ಪ್ರತೀ ವಿಭಾಗದವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರದ ಕುರಿತು ಚರ್ಚಿಸಲಿದ್ದೇವೆ.
-ಎನ್‌.ಎಂ. ಸುರೇಶ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next