ಬಳ್ಳಾರಿ: ಕ್ಯಾನ್ಸರ್‌ನಿಂದ ಮುಕ್ತಿ ಪಡೆಯಲು ಜಿಲ್ಲೆಯಲ್ಲಿ ನಿರಂತರವಾಗಿ ರೋಗ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಎಸ್.ಹಂದ್ರಾಳ್ ಹೇಳಿದರು.
ನಗರದ ಡಿಎಚ್ಒ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಾಂಕ್ರಾಮಿಕ ರೋಗಗಳ ಘಟಕ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ಗರ್ಭಕಂಠದ ಕ್ಯಾನ್ಸರ್‌ನಿಂದ ಒಬ್ಬ ಮಹಿಳೆಯು ಸಾವನ್ನಾಪ್ಪ್ಪುತ್ತಿದ್ದಾರೆ. ಕ್ಯಾನ್ಸರ್ ರೋಗವು ತಂಬಾಕು ಸೇವನೆ, ಬೀಡಿ, ಸಿಗರೇಟ್, ಗುಟ್ಕಾ ಸೇವನೆಯಿಂದ ಬರುತ್ತದೆ. ಈ ರೋಗಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿರಬೇಕೆಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಶಿವರಾಜ್ ಹೆಡೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 71867 ಜನರನ್ನು ಪರೀಕ್ಷಿಸಲಾಗಿದ್ದು, ಇವರಲ್ಲಿ 472 ಜನರನ್ನು ಹೆಚ್ಚಿನ ಪರೀಕ್ಷೆಗಾಗಿ ರೆಫರ್ ಮಾಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪತ್ತೆ ಹಚ್ಚಲ್ಪಟ್ಟ ಶಂಕಿತ ರೋಗಿಯನ್ನು ವಿಮ್ಸ್ ಕ್ಯಾನ್ಸರ್ ವಿಭಾಗಕ್ಕೆ ಕಳುಹಿಸಿಕೊಡಲಾಗುತ್ತದೆ. ಕ್ಯಾನ್ಸರ್ ರೋಗದ ಬಗ್ಗೆ ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸುವುದು ಹಾಗೂ ಬಾಯಿ ಕ್ಯಾನ್ಸರ್ ಇತರೇ ಕ್ಯಾನ್ಸರ್‌ಗಳಿಗೆ ಕಾರಣವಾಗುವುದರಿಂದ ಬಯಾಪ್ಸಿ ಪರೀಕ್ಷೆ ಮಾಡಿಸಿಕೊಂಡು ರೋಗ ಇದೆ ಅಥವಾ ಇಲ್ಲ ಎಂಬ ಕುರಿತು ಖಚಿತ ಪಡಿಸಿಕೊಳ್ಳಬೇಕು ಎಂದರು.
‘ನಾನು ಮತ್ತು ನನ್ನ ಸಂಕಲ್ಪ ನಾವು ಒಟ್ಟಾಗಿ ಕೈಜೋಡಿಸಿದರೆ ಕ್ಯಾನ್ಸರ್ ಗೆಲ್ಲಬಹುದು’ ಎಂಬ ಘೋಷವಾಕ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಜಾಥಾದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಅನಿಲ್‌ಕುಮಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ರಾಜಶೇಖರ್ ರೆಡ್ಡಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ನಿಜಾಮುದ್ದೀನ್, ಆರ್.ಸಿ.ಎಚ್ ಅಧಿಕಾರಿ ಡಾ| ರವೀಂದ್ರನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ| ಅಬ್ದುಲ್ಲಾ, ಎನ್‌ಸಿಡಿ ಕಾರ್ಯಕ್ರಮದ ವ್ಯವಸ್ಥಾಪಕ ಡಾ| ಶಗುಪ್ತಾ ಶಾಹೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಜಿಲ್ಲಾ ಕೀಟಶಾಸ್ತ್ರಜ್ಞ ಡಾ| ಸುಧಾರಾಣಿ, ನಂದಾ ಕಡಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ, ಜಯಶ್ರೀ, ಬಂಡೆಪ್ಪ, ಶಾಂತಮ್ಮ ಉಪ್ಪಾರ್, ಬೋಜರಾಜ, ಆಶಾ ಕಾರ್ಯಕರ್ತರು, ಸರ್ಕಾರಿ ಸುಶ್ರೂಷಕ ತರಬೇತಿ ಕೇಂದ್ರದ ಪ್ರತಿಶಿಕ್ಷಾರ್ಥಿಗಳು ಸೇರಿದಂತೆ ಇನ್ನಿತರರಿದ್ದರು.