Advertisement

ಆತ್ಮಹತ್ಯೆಯ ಅಂತರಾಳ: ಕೆಟ್ಟಯೋಚನೆ ಕಾರ್ಯವಾಗಲು ಏಕೆ ಮನಸ್ಸು ಬಂದಿತೋ…?

09:05 PM Sep 25, 2020 | Karthik A |

ಅಕ್ಕನ ಮದುವೆ ಮುಗಿಸಿ, ಜವಾಬ್ದಾರಿಯ ತೂಕ ಇಳಿಸಿಕೊಂಡು ಎಂದಿನಂತೆ ನಗರದ ಜೀವನಕ್ಕೆ ಹಿಂತಿರುಗಿದ್ದಾಯಿತು. ಅಂದರೆ ಕೆಲಸಕ್ಕೆ. ಒಂದು ಮುಸ್ಸಂಜೆ ಸೂರ್ಯನ ಕೆಲಸ ಮುಗಿದು ಚಂದಿರ ಹಾಜರಾಗಲು ಅತಿ ಹೆಚ್ಚು ಸಮಯ ಬೇಕಿರಲಿಲ್ಲ.

Advertisement

ಸಂಜೆ ಬೀದಿ ಬದಿಯ ಚಹಾ ಅಂಗಡಿಯಲ್ಲಿ ಚಹಾ ಸವಿಯುತ್ತಿದ್ದ ನನಗೆ ಎಂದಿನಂತೆ ನಿರೀಕ್ಷಿಸದೆ ಅಮ್ಮನಿಂದ ಕರೆಬಂತು. ಮಗನ ಉಭಯ ಕುಶಲೋಪರಿ ವಿಚಾರಿಸಿಕೊಳ್ಳಲು ಅಂದುಕೊಂಡು ಕರೆ ಸ್ವೀಕರಿಸಿದೆ.

ಹಲೋ, ಏನ್‌ ಮಾಡ್ತಿದ್ದೀಯಾ? ಕೆಲಸ ಮುಗಿತಾ? ಎಂದು ಒಂದೇ ವೇಗದಲ್ಲಿ ಪ್ರಶ್ನೆಯ ಮಳೆಯ ಸುರಿಸಿ, ಏನೋ ಹೇಳಲು ಹೊರಟವಳಿಗೆ ಬಾಯಿ ಮೂಕಾಯಿತು. ಅಮ್ಮನ ಧ್ವನಿ ಶರವೇಗದಲ್ಲಿ ಆಲಿಸಿ, ಒಮ್ಮೆಲೇ ನಿಂತು ಹೋದಾಗ, ಕರೆಯ ನೆಟ್‌ವರ್ಕ್‌ ಸಮಸ್ಯೆ ಇರಬಹುದೆಂದು ಊಹಿಸಿ ಮತ್ತೂಮ್ಮೆ ಹಲೋ ಎಂದೆ.

ನಿಮ್ಮ ಚಿಕ್ಕಮ್ಮ ಆತ್ಮಹತ್ಯೆ ಮಾಡಿಕೊಂಡಳಂತೆ, ಇವತ್ತು ಮಧ್ಯಾಹ್ನ ಎಂದಷ್ಟೇ ಹೇಳಿ ಪುನಃ ಮೌನ ತಾಳಿದಳು ಅಮ್ಮ. ಹತ್ತು ದಿನದ ಹಿಂದೆಯಷ್ಟೇ ಅಕ್ಕನ ಮದುವೆ ಸಲುವಾಗಿ ಸಂಬಂಧಿಗಳ ಜತೆ ಸೇರಿ ಎಲ್ಲರೂ ಸಂಭ್ರಮಿಸಿದ್ದೆವು. ಚಿಕ್ಕಮ್ಮ ಎರಡು ದಿನದ ಹಿಂದೆಯೇ ಬಂದಿದ್ದಳು ಮದುವೆಗೆ. ಎಲ್ಲ ಶಾಸ್ತ್ರಗಳನ್ನು ಮುಂದೆ ನಿಂತು ನಡೆಸಿಕೊಟ್ಟಿದ್ದಳು.

ಆದರೆ ಈಗ ಆಕೆಯ ಸಾವಿನ ಸುದ್ದಿ ಕಪ್ಪು ಮೋಡದ ಹಾಗೆ, ಕತ್ತಲ ಕೋಣೆಯೊಳಗೆ ಹೆಪ್ಪುಗಟ್ಟಿದ ಸತ್ಯದ ಹಾಗೆ ಮನಸ್ಸನ್ನು ತಿಂದು ಕಣ್ಣ ತುಂಬೆಲ್ಲಾ ವಿಷಾದದ ನೀರೆರೆಸಿತ್ತು. ನಂಬಲಾಸಾಧ್ಯವಾದರೂ ನಂಬಲೇಬೇಕಾದ ಪರಿಸ್ಥಿತಿ ಎದುರಾಗಿತ್ತು.ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನೆಂದು ಕೇಳಿದರೆ, ಅಮ್ಮನಿಂದ ಉತ್ತರ ಮಾತ್ರ ಅಸ್ಪಷ್ಟವಾಗಿತ್ತು. ಬಹಳ ಧೈರ್ಯಗಾತಿ, ಲವಲವಿಕೆಯಿಂದ ತನ್ನ ಜೀವನ ಸಾಗಿಸುತ್ತಿದ್ದ ನನ್ನ ಚಿಕ್ಕಮ್ಮನಿಗೆ ಆತ್ಮಹತ್ಯೆಯಂತಹ ಕೆಟ್ಟಯೋಚನೆ ಕಾರ್ಯವಾಗಲು ಏಕೆ ಮನಸ್ಸು ಬಂದಿತೋ ತಿಳಿಯದು.

Advertisement

ಪ್ರಸ್ತುತ ಆತ್ಮಹತ್ಯೆ ಎಂಬ ಭೂತ, ಅದರ ಹಿಂದಿನ ಸತ್ಯಾಸತ್ಯತೆಗಳ ಸ್ವರೂಪದ ಹೊಗೆ ಬಹಳಷ್ಟು ಪ್ರಚಲಿತವಾಗುತ್ತಿದೆ. ಪ್ರತಿವರ್ಷ ಭಾರತದಲ್ಲಿ ಸುಮಾರು 2,30,000 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದು ಜಗತ್ತಿನ ಶೇ. 17.5 ರಷ್ಟು ಗರಿಷ್ಠ ಭಾರತದಲ್ಲೆ ಎಂಬ ವರದಿಯಿದೆ. ಆತ್ಮಹತ್ಯೆಗೆ ಒಳಪಡುವವರು ಸಹ 15-39 ವಯಸ್ಸಿನ ವಯೋಮಿತಿಯವರೇ ಹೆಚ್ಚು ಎಂದು ಅದೇ ವರದಿ ತಿಳಿಸಿದೆ. ಅಲ್ಲದೇ ಆತ್ಮಹತ್ಯೆಗೆ ಪ್ರಯತ್ನಿಸಿ ಅದರಿಂದ ವಿಫ‌ಲವಾದವರ ಸಂಖ್ಯೆ ಹೆಚ್ಚು ಎಂಬುವುದು ಗಮನಾರ್ಹವಾದ ಸಂಗತಿ.

ಇತ್ತೀಚೆಗೆ ಪ್ರಸಿದ್ಧಿ ಪಡೆದ ವ್ಯಕ್ತಿಗಳು ಆತ್ಮಹತ್ಯಗೆ ಶರಣಾದಾಗ ಇಡೀ ಒಂದು ಸಮೂಹವೇ ಯೋಚನೆ ಮಾಡುವಂತೆ ಮಾಡಿದೆ. ಆತ್ಮಹತ್ಯೆಗೆ ಒಳಗಾಗುವವರ ಯೋಚನೆಗಳು, ಮನಸ್ಥಿತಿಗಳು ತೀರ ಸಹಜವಾದದ್ದು. ಒಂಟಿತನ, ಭಾವೋದ್ವೇಗ, ನಂಬಿಕೆಯ ವಿಷಯ, ಪ್ರೀತಿ ಪ್ರೇಮದ ಸೋಲು, ಖನ್ನತೆ, ಒತ್ತಡ, ಭಿನ್ನಾಭಿಪ್ರಾಯ, ಇವೆಲ್ಲವೂ ಒಬ್ಬ ವ್ಯಕ್ತಿಯ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಆಂತರಿಕ ಸಮಸ್ಯೆಗಳನ್ನು ವಿಕಾರ ಗೊಳಿಸಿ ಆತ್ಮಹತ್ಯೆ ಪ್ರವೃತ್ತಿಯೆಡೆಗೆ ಅವರನ್ನು ಕೊಂಡುಯ್ಯುತ್ತದೆ. ಕೂತು ಬಗೆಹರಿಸುವ ಸಮಸ್ಯೆಯನ್ನು ದುಡುಕಿ ಆತ್ಮಹತ್ಯೆ ಎಂಬ ಸ್ವಯಂ ಶಿಕ್ಷ ಮಾರ್ಗ ಹಿಡಿದು ಜೀವನವನ್ನು ಅಂತ್ಯಗೊಳಿಸುತ್ತಾರೆ.

ಜೀವನದ ಎಲ್ಲ ಸಮಸ್ಯೆಗಳಿಗೆ ಹೊಂದಾಣಿಕೆಯ ಮೂಲ ಪರಿಹಾರ. ಸೋಲು, ಹತಾಶೆ ಇದ್ದದ್ದೆ ಇದ್ಕಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಲ್ಲ. ಒಮ್ಮೆ ಹೆತ್ತವರ ಮುಖ ನೋಡಿಯಾದರೂ ನಾವು ಬದುಕಬೇಕು. ಇನ್ನು ಸಂಬಂಧಗಳ ಭಿನ್ನಾಭಿಪ್ರಾಯಕ್ಕೆ ಸಮಾನ ದೃಷ್ಟಿ ಅಗತ್ಯವಿದೆ. ಒತ್ತಡ, ಖನ್ನತೆ ಇವೆಲ್ಲವೂ ನಮ್ಮ ಮನಸಿನ ಮೇಲಿರುವ ನೀರಿನ ಗುಳ್ಳೆಯಷ್ಟೇ.


ಅಭಿಷೇಕ್‌ ಎಂ.ವಿ., ಕಂಪ್ಯೂಟರ್‌ ಸೈನ್ಸ್‌  ವಿದ್ಯಾರ್ಥಿ, ಸರಕಾರಿ ಎಂಜಿನಿಯರಿಂಗ್‌ ಕಾಲೇಜು, ರಾಮನಗರ 

Advertisement

Udayavani is now on Telegram. Click here to join our channel and stay updated with the latest news.

Next