ಬೆಳಗಾವಿ: ಬೆಳಗಾವಿ ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತರಕಾರಿ ತೆಗೆದುಕೊಂಡು ಬರುವ ಸುತ್ತಮುತ್ತಲಿನ ಭಾಗಗಳ ರೈತರಿಗೆ ಯೋಗ್ಯ ಬೆಲೆ ನೀಡುವ ಮೂಲಕ ವ್ಯಾಪಾರಸ್ಥರು ಸಹಕರಿಸಬೇಕು ಎಂದು ಅರಣ್ಯ ಹಾಗೂ ಪರಿಸರ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರೈತರು ನಿತ್ಯ ತರಕಾರಿ ಈ ಮಾರುಕಟ್ಟೆಗೆ ತೆಗೆದುಕೊಂಡು ಬರುತ್ತಾರೆ. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವ್ಯಾಪಾರಸ್ಥರ ಮೇಲಿದೆ. ಬೆಳಗಾವಿ ಸುತ್ತಲಿನ ಅನೇಕ ಭಾಗಗಳಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ನಿತ್ಯ ತರಕಾರಿ ಈ ಮಾರುಕಟ್ಟೆಗೆ ಬರುತ್ತದೆ. ಹೀಗಾಗಿ ಯೋಗ್ಯ ದರ ರೈತರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ವ್ಯಾಪಾರಸ್ಥರು ವ್ಯಾಪಾರ- ವಹಿವಾಟು ನಡೆಸಬೇಕು ಎಂದರು.
ಸಮಸ್ಯೆಯಾಗದಂತೆ ನಿಗಾವಹಿಸಿ: ಈಗಾಗಲೇ 132 ಮಳಿಗೆಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿದೆ. ಕೆಲವು ತಿಂಗಳ ಹಿಂದೆ ಇದನ್ನು ಉದ್ಘಾಟಿಸಲಾಗಿದ್ದು, ಸದ್ಯ ಎಲ್ಲ ಅಂಗಡಿ ಟೆಂಡರ್ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲಾಗಿದೆ. ಆರು ತಿಂಗಳಲ್ಲಿ ಇನ್ನೂ 60 ಅಂಗಡಿ ನಿರ್ಮಾಣ ಕಾರ್ಯ ಮುಗಿಯಲಿದ್ದು, ಅಲ್ಲಿಯೂ ಇನ್ನುಳಿದ ವ್ಯಾಪಾರಸ್ಥರು ವಹಿವಾಟು ನಡೆಸಬೇಕು. ಯಾವುದೇ ಸಮಸ್ಯೆಯಾಗದಂತೆ ಎಪಿಎಂಸಿ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು.
ಕೃಷಿ ಮಾರುಕಟ್ಟೆ ಜಂಟಿ ಕಾರ್ಯದರ್ಶಿ ಹಾಗೂ ಬಾಜಿ ಮಾರ್ಕೆಟ್ ಅಧ್ಯಕ್ಷರು ಸೇರಿ ವ್ಯಾಪಾರಿಗಳ ಸಮಸ್ಯೆ ಬಗೆಹರಿಸಿ ನಮ್ಮ ಹತ್ತಿರ ಇನ್ನೊಮ್ಮೆ ಬರದಂತೆ ನೋಡಿಕೊಳ್ಳಿ. ವ್ಯಾಪಾರಿಗಳು ತಮ್ಮ ಸಮಸ್ಯೆ ಮಾರುಕಟ್ಟೆ ಅಧಿಕಾರಿಗಳೊಂಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ. ನಾನು ಸಹ ಸದಾ ವ್ಯಾಪಾರಸ್ಥರೊಂದಿಗೆ ಇರುತ್ತೇನೆ ಎಂದು ವ್ಯಾಪಾರಸ್ಥರಿಗೆ ಭರವಸೆ ನೀಡಿದರು.
Advertisement
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಸಗಟು ತರಕಾರಿ ವ್ಯಾಪಾರ ಮಳಿಗೆಗಳನ್ನು ರವಿವಾರ ವೀಕ್ಷಿಸಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರೊಂದಿಗೆ ಸಮಾಲೋಚನೆ ನಡೆಸಿ, ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
Related Articles
Advertisement
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಗುರುಪ್ರಸಾದ ಮಾತನಾಡಿ, ಎಲ್ಲ ವ್ಯಾಪಾರಿಗಳನ್ನು ಒಂದೇ ದೃಷ್ಟಿಯಿಂದ ನೋಡಲಾಗುತ್ತಿದೆ. ಬೆಳಗಾವಿಯಲ್ಲಿ ಸಗಟು ತರಕಾರಿ ಮಾರುಕಟ್ಟೆಯನ್ನು ವಿಶಾಲ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದ್ದು, ಎಲ್ಲರಿಗೂ ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆ. ದೇಶದಲ್ಲಿಯೇ ಮಾದರಿ ಮಾರುಕಟ್ಟೆಯನ್ನಾಗಿಸಲು ಎಲ್ಲರೂ ಸಹಕಾರ ನೀಡಬೇಕು. ವ್ಯಾಪಾರಸ್ಥರು ಅನೇಕ ಬೇಡಿಕೆಗಳನ್ನಿಟ್ಟಿದ್ದು, ಇವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ದಂಡು ಮಂಡಳಿ ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆ ನಡೆಸುತ್ತಿದ್ದ ಕೆಲವು ವ್ಯಾಪಾರಸ್ಥರು ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡರು. ಅನೇಕ ವರ್ಷಗಳಿಂದ ಮಾರುಕಟ್ಟೆ ನಡೆಸಿಕೊಂಡು ಬರಲಾಗುತ್ತಿದ್ದು, ಏಕಾಏಕಿ ಅಲ್ಲಿಂದ ಸ್ಥಳಾಂತರ ಮಾಡಲಾಗಿದೆ. ಈಗಾಗಲೇ 102 ಅಂಗಡಿ ಹಂಚಿಕೆ ಮಾಡಿದ್ದಾರೆ. ಆದರೆ ನಾವು ಅತಂತ್ರವಾಗಿದ್ದೇವೆ. 240 ಮಂದಿ ವ್ಯಾಪಾರಸ್ಥರಿಗೆ ಅಂಗಡಿ ನೀಡಬೇಕು. ಅದೇ ರೀತಿ ಪರವಾನಗಿ ಪತ್ರವನ್ನು ಎಪಿಎಂಸಿಯಿಂದ ನೀಡಬೇಕು. ಶಾಶ್ವತವಾಗಿ ವ್ಯಾಪಾರ ವಹಿವಾಟು ಮಾಡಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಎಪಿಎಂಸಿ ಅಧ್ಯಕ್ಷ ಆನಂದ ಪಾಟೀಲ, ಉಪಾಧ್ಯಕ್ಷ ಸುಧೀರ ಗಡ್ಡಿ, ಎಸಿಪಿ ಎನ್.ವಿ. ಭರಮಣಿ, ಸಗಟು ತರಕಾರಿ ಮಾರುಕಟ್ಟೆ ಅಸೋಸಿಯೇಷನ್ ಅಧ್ಯಕ್ಷ ಭಾವು ಶಹಾಪುರಕರ, ಸದಾನಂದ ಹುಂಕರಿಪಾಟೀಲ, ಮಹೇಶ ಕುಗಜಿ, ಆರ್.ಎಸ್. ಪಾಟೀಲ, ಬಸನಗೌಡ ಪಾಟೀಲ, ಸತೀಶ ಪಾಟೀಲ, ಎ.ಕೆ. ಬಾಗವಾನ, ದಿವಾಕರ ಪಾಟೀಲ, ವಿಶ್ವನಾಥ ಪಾಟೀಲ, ಅನಂತರಾವ್ ಸೇರಿದಂತೆ ಇತರರು ಇದ್ದರು.
ಸಚಿವರಿಗೆ ವ್ಯಾಪಾರಸ್ಥರಿಂದ ಸನ್ಮಾನ
ಅನೇಕ ವರ್ಷಗಳಿಂದ ಹೊಸ ತರಕಾರಿ ಮಾರುಕಟ್ಟೆಗಾಗಿ ಇದ್ದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಆರಂಭವಾದ ನೂತನ ಸಗಟು ತರಕಾರಿ ಮಾರುಕಟ್ಟೆಯಲ್ಲಿಯ ವ್ಯಾಪಾರಸ್ಥರು ರವಿವಾರ ಸಚಿವರನ್ನು ಸನ್ಮಾನಿಸಿದರು. ಮಾರುಕಟ್ಟೆಗೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ವ್ಯಾಪಾರಸ್ಥರು ಶಾಲು ಹೊದಿಸಿ ಸತ್ಕರಿಸಿದರು.