ಹೊಸದಿಲ್ಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಬಗ್ಗೆ ಇಂದು ಮಹತ್ವದ ತೀರ್ಪು ನೀಡಿದ್ದು, ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ತಾತ್ಕಾಲಿಕವಾಗಿದ್ದು, ಅದನ್ನು ರದ್ದು ಮಾಡುವ ಅಧಿಕಾರವು ರಾಷ್ಟ್ರಪತಿಗಳಿಗಿದೆ ಎಂದು ಹೇಳಿದೆ.
ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಹಲವು ಸೂಚನೆಗಳನ್ನೂ ಸರ್ವೋಚ್ಛ ಪೀಠ ನೀಡಿದೆ. ಜಮ್ಮು ಕಾಶ್ಮೀರ ಮರು ಸಂಘಟನಾ ಕಾಯ್ದೆಯಡಿ ಕಿತ್ತುಕೊಂಡಿರುವ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕು ಎಂದಿದೆ. 2019ರಿಂದ ಜಮ್ಮು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿದೆ.
ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಮರುಸಂಘಟನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ
ಶಾಸನಸಭೆಗೆ ಚುನಾವಣೆ ನಡೆಸುವುದನ್ನು ನಿಯಂತ್ರಣದಲ್ಲಿರಿಸಬಾರದು. 2024ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಕಾಶ್ಮೀರದ ಶಾಸನಸಭೆಗೆ ಚುನಾವಣೆಗಳನ್ನು ನಡೆಸಲು ಭಾರತದ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಡಿಸೆಂಬರ್ 2018 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ರಾಷ್ಟ್ರಪತಿ ಆಳ್ವಿಕೆಯ ಸಿಂಧುತ್ವವನ್ನು ಅರ್ಜಿದಾರರು ನಿರ್ದಿಷ್ಟವಾಗಿ ಪ್ರಶ್ನಿಸದ ಕಾರಣ ತೀರ್ಪು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.