ರಾಮನಗರ: ರಾಜ್ಯದ 17 ಜಿಲ್ಲೆಗಳ ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡುವ ಜತೆಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಕೇಂದ್ರ ಸರ್ಕಾರ ತಕ್ಷಣ ರಾಜ್ಯ ಸರ್ಕಾರದ ಮೂಲಕ ನೆರವು ನೀಡಬೇಕಾಗಿದೆ. ಮುಳುಗಡೆಯಾ ಗಿರುವ ಹಳ್ಳಿಗಳನ್ನು ತೆರವು ಮಾಡಿ ಪುನರ್ ನಿರ್ಮಾಣ ಮಾಡಬೇಕು, ಜಾನುವಾರು ಗಳನ್ನು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.
ಸಾಲ ವಸೂಲಾತಿ ನಿಲ್ಲಿಸಿ: ಮನೆ ಕಳೆದುಕೊಂಡವರಿಗೆ ಸರ್ಕಾರ ತಲಾ 10 ಲಕ್ಷ ರೂ ನೆರವು ಕೊಟ್ಟು ಮನೆ ನಿರ್ಮಿಸಿಕೊಳ್ಳಲು ಅವಕಾಶ ಕೊಡಬೇಕು. ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ., ಪರಿಹಾರ ನೀಡಬೇಕು. ರೈತರು ಮತ್ತು ಮಹಿಳಾ ಸಂಘಟನೆಗಳ ಯಾವುದೇ ಸಾಲಗಳ ವಸೂಲಾತಿ ನಿಲ್ಲಿಸಬೇಕು ಎಂದರು.
ಏಕಾಏಕಿ ಹರಿದ ನೀರು, ಯಾರ ಹೊಣೆ?: ಜಲಾಶಯಗಳ ನಿರ್ವಹಣೆ ಹೊಣೆ ಹೊತ್ತವರ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕದ ನೂರಾರು ಹಳ್ಳಿಗಳು ಜಲಾವೃತ್ತವಾಗಿದ್ದವು. ಅಲ್ಲಿನ ಕಬ್ಬಿನ ತೋಟ ಸೇರಿದಂತೆ ನೀರು ಆವೃತ್ತವಾಗಿದ್ದ ತೋಟಗಳೆಲ್ಲಾ ಕೊಳೆತು ನಾರುತ್ತಿವೆ. 10 ನದಿ ನೀರು ಒಮ್ಮೆಲೆ ದಿನಗ ಟ್ಟಲೆ ಹರಿದರೆ ಏನಾದರೂ ಉಳಿದೀತೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಇದೀಗ ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, 17 ಜಿಲ್ಲೆಗಳಿಗೂ ಒಬ್ಬಬ್ಬ ಸಚಿವರನ್ನು ಕಳುಹಿಸಿ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
Advertisement
ಈ ವೇಳೆ ಮಾತನಾಡಿದ ಮುಖಡರು, ಪ್ರವಾಹ ಗಂಭೀರ ಪರಿಸ್ಥಿತಿಯನ್ನು ಉಂಡು ಮಾಡಿ ಜನ, ಜಾನುವಾರುಗಳ ಸಾವಿಗೆ ಕಾರಣವಾಗಿದೆ, ಆಸ್ತಿ ನಷ್ಟವಾಗಿದೆ ಎಂದು ಹೇಳಿದರು.
Related Articles
Advertisement
ಬೀದಿಗಿಳಿದು ಹೋರಾಟ: ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಣಸ್ವಾಮಿ ಮಾತನಾಡಿ, ಇಂದು ಸಾಂಕೇತಿಕ ಹೋರಾಟ ನಡೆದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಸ್ಪಂದಿಸದಿದ್ದರೆ, ಇಡೀ ರಾಜ್ಯದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ನೀಡಿದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಸ್ವೀಕರಿಸಿದರು. ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬೈರೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಾಸೇಗೌಡ, ಜಿಲ್ಲಾ ಹಸಿರು ಸೇನೆ ಸಂಚಾಲಕ ಶ್ರೀನಿವಾಸ್ ನಲ್ಲಹಳ್ಳಿ, ರೈತ ಸಂಘದ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಪಿ.ರಮೇಶ್, ಕನಕಪುರ ತಾಲೂಕು ಅಧ್ಯಕ್ಷ ಅನಂತ್‌ರಾಮ್ ಪ್ರಸಾದ್, ಜಿಲ್ಲೆಯ ಮಹಿಳಾ ಪದಾಧಿಕಾರಿಗಳಾದ ನಾಗಮ್ಮ, ಸುಕನ್ಯಾ, ಮಾಗಡಿ ತಾಲೂಕು ಅಧ್ಯಕ್ಷ ಗೋವಿಂದರಾಜು, ಪ್ರಮುಖರಾದ ರೇಣುಕಯ್ಯ, ನಂದಿನಿ, ಗಿರೀಶ್ ಮತ್ತಿತರರಿದ್ದರು.
ಅನ್ನ ಕೊಡುವ ರೈತರೇ ಅನ್ನಕ್ಕಾಗಿ ಬೇಡುವ ಸ್ಥಿತಿ:
ಕೇಂದ್ರ ಸರ್ಕಾರ ತಕ್ಷಣ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ನೆರೆ ಹಾವಳಿಯಿಂದ ಸುಮಾರು 14.5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಅನ್ನ ಬೆಳೆಯುವ ಕೈಗಳು ಅನ್ನಕ್ಕಾಗಿ ಬೇಡುವ ಸ್ಥಿತಿ ಬಂದಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ರಾಜ್ಯ-ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ತಾಳಿದೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಳೆದಿದೆ ಎಂದು ರೈತ ಸಂಘದ ಮುಖಂಡರು ದೂರಿದರು.