ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಈ ಬಾರಿ ಹಿರಿಯ ಸಾಹಿತಿ ಡಾ| ಸರಸ್ವತಿ ಚಿಮ್ಮಲಗಿ ಅವರನ್ನು ಗೆಲ್ಲಿಸುವ ಮೂಲಕ ಅವರಿಗೆ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಸಾರಥ್ಯ ವಹಿಸಬೇಕೆಂದು ಮಾಜಿ ಸಚಿವೆ, ಲೇಖಕಿ ಬಿ.ಟಿ. ಲಲಿತಾ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಮಹಿಳೆಯರು ಇದ್ದಾರೆ. ಪ್ರಬುದ್ಧತೆಯನ್ನು ಹೊಂದಿದ್ದಾರೆ. ಆದರೂ, ಕನ್ನಡ ಸಾಹಿತ್ಯ ಪರಿಷತ್‌ನ 106 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆಯೂ ರಾಜ್ಯಾಧ್ಯಕ್ಷ ಸ್ಥಾನಕ್ಕೇರಲು ಸಾಧ್ಯವಾಗಿಲ್ಲ. ಆದ್ದರಿಂದ ಡಾ| ಸರಸ್ವತಿ ಚಿಮ್ಮಲಗಿ ಅವರಿಗೆ ಮತದಾರರು ಅವಕಾಶ ಕೊಡಬೇಕೆಂದು ಕರೆ ನೀಡಿದರು.
ಮಹಿಳೆಯಿಂದ ಏನೂ ಮಾಡಲು ಆಗೋದಿಲ್ಲ ಎಂಬಂತ ಮೌಡ್ಯ ತೊಲಗಬೇಕು. ಮಹಿಳೆಯರಲ್ಲಿ ಸತ್ವ ಇರುತ್ತದೆ. ಅದನ್ನು ನಿರೂಪಿಸಲು ಅವಕಾಶ ಒದಗಿಸಬೇಕು. ಪುರುಷರಿಗೂ ಮೀರಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮತದಾರರು ಅವಕಾಶ ಕಲ್ಪಿಸಿದ್ದೇ ಆದಲ್ಲಿ ತಮ್ಮ ಸಾಧನೆಯನ್ನು ಸರಸ್ವತಿ ಚಿಮ್ಮಲಗಿ ಮಾಡಿ ತೋರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೊಡ್ಡ-ದೊಡ್ಡ ಮಹಿಳಾ ಸಾಹಿತಿಗಳು ಆಗಿ ಹೋಗಿದ್ದಾರೆ. ಆದರೆ, ಯಾವರ್ಯಾರು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವ ಧೈರ್ಯ ಮಾಡಿರಲಿಲ್ಲ. ಈಗ ಸರಸ್ವತಿ ಚಿಮ್ಮಲಗಿ ಧೈರ್ಯ ಮಾಡಿ, ಕಣಕ್ಕಿಳಿದಿದ್ದಾರೆ. ಅವರು ಸಾಹಿತ್ಯ ಮಾತ್ರವಲ್ಲದೇ ರಂಗಭೂಮಿ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹೊಸಬರು ಅವರಿಗೆ ಅವಕಾಶ ನೀಡುವ ಮೂಲಕ ಹೊಸ ಆಲೋಚನೆಗಳಿಗೆ ಮುನ್ನುಡಿ ಬರೆಯುವ ಕೆಲಸ ಆಗಬೇಕಿದೆ ಎಂದರು.
ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸರಸ್ವತಿ ಚಿಮ್ಮಲಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ 106 ವರ್ಷಗಳ ಇತಿಹಾಸದಲ್ಲಿ ಪುರುಷರಿಗೆ ಅವಕಾಶ ನೀಡುತ್ತಾ ಬರಲಾಗಿದೆ. ಪ್ರಸ್ತುತ ಕಸಾಪ ಚುನಾವಣೆಯಲ್ಲಿ 21 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ನಾನಾಗಿರುವೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸಿ ಮಹಿಳೆಗೆ ಅವಕಾಶ ನೀಡಿ ದಾಖಲೆ ಬರೆಯಬೇಕೆಂದು ಮನವಿ ಮಾಡಿದರು.
ನನ್ನನ್ನು ಆಯ್ಕೆ ಮಾಡಿದರೆ ಕನ್ನಡ ನಾಡು-ನುಡಿ, ಜಲ-ನೆಲ, ಗಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಕಾಳಜಿ ವಹಿಸಲು ಶ್ರಮಿಸುತ್ತೇನೆ. ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಆಗಲು ಕ್ರಮ ವಹಿಸುತ್ತೇನೆ. ಪರಿಷತ್‌ನ ಬೈಲಾದಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಲಾವುದು ಸೇರಿ ನನ್ನದೇ ಆದ ಯೋಜನೆಗಳನ್ನು ಹಾಕಿಕೊಂಡಿರುವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳಾದ ಸಂಧ್ಯಾ ಹೊನಗುಂಟಿಕರ್, ಜ್ಯೋತಿ ಬದಾಮಿ, ಚಂದ್ರಕಲಾ, ವೈಷ್ಣವಿ ದೇಶಮುಖ, ಬೆಳಗಾವಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಶೋಕ ಮಳಲಗಿ ಇದ್ದರು.