ಮಾನ್ವಿ: ಭೂರಹಿತ 226 ಕುಟುಂಬಗಳಿಗೆ ಪಟ್ಟಾ ನೀಡಲು ಆಗ್ರಹಿಸಿ ತಾಲೂಕಿನ ಕೆ. ಗುಡದಿನ್ನಿ ಗ್ರಾಮದಿಂದ ಮಾನ್ವಿ ತಹಶೀಲ್ದಾರ ಕಚೇರಿವರೆಗೆ 226 ಕುಟುಂಬಗಳೊಂದಿಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಟಿಎಪಿಸಿಎಂಎಸ್ ಅವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ತಾಲೂಕಿನ ಕೆ. ಗುಡದಿನ್ನಿ, ಬಲ್ಲಟಗಿ, ಶ್ರೀನಿವಾಸಕ್ಯಾಂಪ್, ಜಂಬಲದಿನ್ನಿ, ಚೌಧರಿ ಕ್ಯಾಂಪ್, ಚಾಗಬಾವಿ ಗ್ರಾಮಗಳಲ್ಲಿನ ಸರ್ಕಾರಿ ಭೂಮಿ ಸ.ನಂ.11/ಅ ಮತ್ತು 11/ಆ 52, 53, 54, 55, 64ರ 200 ಎಕರೆ ಭೂಮಿಯನ್ನು 226 ಭೂರಹಿತ ರೈತರು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಭೂಮಿಗೆ ಕನ್ನ ಹಾಕಲು ಯತ್ನಿಸುತ್ತಿರುವ ಭೂಮಾಪೀಯಾಗಳ ಮೇಲೆ ಕ್ರಮ ಜರುಗಿಸಿ, ಭೂರಹಿತ ಕುಟುಂಬಗಳಿಗೆ ಪಟ್ಟಾ ನೀಡಬೇಕೆಂದು ಆಗ್ರಹಿಸಿದರು. ಕಳೆದ 28 ವರ್ಷಗಳಿಂದ ಪಡಾ ಬಿದ್ದಿದ್ದ ಸ.ನಂ.11/ಅ ಮತ್ತು 11/ಆ 52, 53, 54, 55, 64ರ ಪೈಕಿ 200 ಎಕರೆ ಭೂಮಿಯನ್ನು 226 ಕುಟುಂಬಗಳು ಸಾಗುವಳಿ ಮಾಡಿತ್ತಿರುವುದನ್ನು ಗಮನಿಸಿ ಕೆಲ ನೆಲಗಳ್ಳರು ನಕಲಿ ವಂಶಾವಳಿ ದಾಖಲಾತಿ ಮೂಲಕ 25 ವರ್ಷಗಳ ಹಿಂದೆ ಈ ಭೂಮಿಯನ್ನು ಖರೀದಿಸಿರುವುದಾಗಿ ಬೆಂಗಳೂರು ನ್ಯಾಯಾಧಿ ಕರಣಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಕೆ.ಗುಡದಿನ್ನಿಯಲ್ಲಿನ ಈ ಭೂಮಿ ಮೂಲತಃ ರಾಘವೇಂದ್ರರಾವ್ ಎನ್ನುವ ಬ್ರಾಹ್ಮಣ ಸಮಾಜದವರಿಗೆ ಸೇರಿದ್ದಾಗಿದೆ. ಆದರೆ ಕುಟುಂಬದ ಸುಳಿವು ಕೂಡಾ ಇಲ್ಲ. ಹೀಗಾಗಿ ಈ ಭೂಮಿಯನ್ನು 1992ರಲ್ಲಿ ಸರ್ಕಾರಿ ಭೂಮಿಯೆಂದು ಆದೇಶ ಹೊರಡಿಸಲಾಗಿದೆ. ಈಗ ಏಕಾಏಕಿ ಮಾಲೀಕರನ್ನು ಸೃಷ್ಟಿಸಿ ಭೂ ಕಬಳಿಸುವ ಹುನ್ನಾರ ನಡೆದಿದೆ. ಕೂಡಲೇ ಸಾಗುವಳಿ ಮಾಡುತ್ತಿರುವ ಭೂಹೀನರಿಗೆ ಪಟ್ಟಾ ನೀಡಬೇಕು ಮತ್ತು ನಕಲಿ ವಂಶಾವಳಿ ದಾಖಲೆಗಳ ಮೂಲಕ ಭೂಮಿ ಕಬಳಿಸಲು ಮುಂದಾಗಿರುವ ಭೂ ಮಾಫೀಯಾ, ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೆಆರ್‌ಎಸ್ ಪ್ರಧಾನ ಕಾರ್ಯದರ್ಶಿ ಅಶೋಕ ನಿಲೋಗಲ್, ತಾಲೂಕು ಅಧ್ಯಕ್ಷ ವಿ. ಮುದುಕಪ್ಪ ನಾಯಕ, ಬಸವರಾಜ ಬಾಗಲವಾಡ, ಆರ್. ಹುಚ್ಚರೆಡ್ಡಿ, ಚನ್ನಮ್ಮ, ಸಂತೋಷ ಹಿರೇದಿನ್ನಿ, ಆನಂದ ಭೋವಿ, ಗಂಗಪ್ಪ ತೋರಣದಿನ್ನಿ, ಎಚ್. ಕೆ. ಚನ್ನಬಸವ, ಹನುಮಂತ ದೇಸಾಯಿ, ಗ್ರಾಮ ಘಟಕ ಅಧ್ಯಕ್ಷ ವೀರೇಶ ನಾಯಕ, ಲಾಲಪ್ಪ ನಾಯಕ, ಗಜೇಂದ್ರ ಕಲ್ಲೂರು, ಪರಶುರಾಮ, ಶರಣಯ್ಯಸ್ವಾಮಿ, ಹನುಮಂತ ಸಿರವಾರ, ಹುಲಿಗೆಪ್ಪ, ನಾಗರಾಜ, ಮುದುಕಪ್ಪ ಗಣದಿನ್ನಿ, ಗೌರಪ್ಪ, ಮಲ್ಲಯ್ಯ ನಾಯಕ, ವೆಂಕಟೇಶ ನಾಯಕ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.