Advertisement

ಅರ್ಹರಿಗೆ ಸೌಲಭ್ಯ ಕೊಡಿ: ಡಿಸಿ

04:46 PM Sep 16, 2017 | |

ಶಿವಮೊಗ್ಗ: ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಮೀಸಲಾಗಿರುವ ಅನುದಾನವನ್ನು ಕೆಲವೇ ಫಲಾನುಭವಿಗಳು ಪಡೆಯುತ್ತಿರುವ ಬಗ್ಗೆ ದೂರು ಬಂದಿದ್ದು, ಪ್ರತಿಯೊಬ್ಬ ಅರ್ಹರಿಗೂ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಎಂ. ಲೋಕೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪಂಗಡ ಅನುದಾನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಚೇರಿಗಳ ಸುತ್ತ ಸುತ್ತುವ ಕೆಲವರು ಮಾತ್ರ ಎಲ್ಲಾ ಅನುದಾನ ಪಡೆದುಕೊಳ್ಳುತ್ತಿದ್ದು, ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ದೂರುಗಳಿವೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

Advertisement

ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಇಲಾಖೆಗಳು ಹೊಸ ಹೊಸ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ
ವಿತರಿಸಬೇಕು. ಒಬ್ಬನೇ ವ್ಯಕ್ತಿ ಅಥವಾ ಕುಟುಂಬಕ್ಕೆ ನಿರಂತರವಾಗಿ ಸೌಲಭ್ಯ ಸಿಗುವುದನ್ನು ತಪ್ಪಿಸಬೇಕು. ಎಲ್ಲಾ ಇಲಾಖೆಗಳು ಫಲಾನುಭವಿಗಳ ಮಾಹಿತಿಯನ್ನು ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್‌ ಕುಮಾರ್‌ ಮಾತನಾಡಿ, ಬಗರ್‌ ಹುಕುಂ ಇತ್ಯಾದಿಗಳ ಅಡಿಯಲ್ಲಿ ಹೊಸದಾಗಿ
ಜಮೀನು ಮಂಜೂರಾಗಿರುವವರಿಗೆ ಆದ್ಯತೆ ಮೇರೆಗೆ ಸೌಲಭ್ಯ ಒದಗಿಸಬೇಕು. ಅಂತಹ ಅರ್ಹರಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಒದಗಿಸಿದರೆ ಅವರು ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯವಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆ ಕನಿಷ್ಟ 40ರಷ್ಟು ಇರುವ ಕಡೆಗಳಲ್ಲಿ ಮಾತ್ರ ಈ ಅನುದಾನ ವೆಚ್ಚ ಮಾಡಬೇಕು ಎಂದು
ಹೇಳಿದರು.

ಶೋಕಾಸ್‌ ನೋಟಿಸ್‌: ಬಹುತೇಕ ಇಲಾಖೆಗಳು ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾಗಿರುವ ಅನುದಾನದವನ್ನು
ಸಮರ್ಪಕವಾಗಿ ಬಳಸಿಕೊಂಡಿಲ್ಲ. ಶೇ. 50 ಕ್ಕಿಂತ ಕಡಿಮೆ ಸಾಧನೆ ಮಾಡಿರುವ ಎಲ್ಲಾ ಇಲಾಖೆಗಳಿಗೆ ಕಾರಣ ಕೇಳಿ ನೊಟೀಸ್‌ ಜಾರಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಎಲ್ಲಾ ಇಲಾಖೆಗಳು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಮುಂದಿನ ಸಭೆಯ ಒಳಗಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಆರಂಭಿಸಿರಬೇಕು. ಅನುದಾನದ ಸಂಪೂರ್ಣ ಲಾಭ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅನುದಾನ ಬಳಸಿಕೊಂಡು ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಪೂರಕ ಉಪಕರಣ, ಹಾಸ್ಟೆಲ್‌ನಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಸಬಹುದಾಗಿದೆ ಎಂದು ಹೇಳಿದರು.
ಗಾಡಿಕೊಪ್ಪ ಬಳಿ ವಾಸವಾಗಿರುವ ಹಕ್ಕಿಪಿಕ್ಕಿ ಜನಾಂಗದ ಮಕ್ಕಳಿಗೆ ಮಿನಿ ಅಂಗನವಾಡಿ ಆರಂಭಿಸುವ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಇದೇ ರೀತಿ ಜಿಲ್ಲೆಯಲ್ಲಿ ಇದುವರೆಗೆ ಮಂಜೂರಾಗಿರುವ ಅಂಬೇಡ್ಕರ್‌ ಭವನಗಳಿಗೆ ಲಭ್ಯವಿರುವ ಜಮೀನಿನ ಬಗ್ಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next