ಮೈಸೂರು: ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ಹಾಗೂ ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ಮೈಸೂರು ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ದೊರೆಯಿತು.
ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ ನಡೆಸುತ್ತಿರುವ ಪಂದ್ಯಾವಳಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಿ. ರಂದೀಪ್ ಮಾತನಾಡಿ, ಪ್ರಸ್ತುತ ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗುತ್ತಿರುವುದು ಸಂತಸದ ಸಂಗತಿಯಾಗಿದ್ದು, ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಹೀಗಾಗಿ ಶಿಕ್ಷಣದಲ್ಲಿ ಮಾತ್ರವಲ್ಲದೆ, ಕ್ರೀಡಾ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಇದಕ್ಕೆ ಪೋಷಕರು ಪೋ›ತ್ಸಾಹ ನೀಡಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಸದೃಢತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ನಾವು ಅವರಂತೆ ಸದೃಢತೆಗೆ ಆದ್ಯತೆ ನೀಡುವ ಮೂಲಕ ಮಾದರಿಯಾಗಬೇಕು ಎಂದು ತಿಳಿಸಿದರು.
ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ಆರೋಗ್ಯದಲ್ಲಿ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕಿದ್ದು, ಅದರಲ್ಲೂ ಬ್ಯಾಡ್ಮಿಂಟನ್ ಅತ್ಯಂತ ಚಾಣಾಕ್ಷತೆ ಯಿಂದ ಆಡುವ ಆಟವಾಗಿದ್ದು, ಪ್ರತಿನಿತ್ಯ ಬ್ಯಾಡ್ಮಿಂಟನ್ ಆಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.
ಪ್ರಸ್ತುತ ಮಕ್ಕಳು, ಪೋಷಕರಲ್ಲಿ ಬ್ಯಾಡ್ಮಿಂಟನ್ ಬಗ್ಗೆ ಆಸಕ್ತಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.ಮೂರು ದಿನಗಳು ನಡೆಯುವ ಪಂದ್ಯಾವಳಿಯಲ್ಲಿ ಮೈಸೂರು, ಕೊಡಗು, ಚಾಮರಾಜನಗರದಿಂದ ಅಂದಾಜು 250 ಆಟಗಾರರು ಭಾಗವಹಿಸಿದ್ದು, ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿದೆ.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಎಂ. ಕೃಷ್ಣಯ್ಯ, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್.ಜಿ. ಪ್ರಭು, ಕೊಡವ ಸಮಾಜದ ಅಧ್ಯಕ್ಷ ಮೂವೇರ ಕೆ.ಕುಟ್ಟಪ್ಪ, ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್‌ನ ಅಧ್ಯಕ್ಷ ಮಾಚಿಮಾಡ ಪಿ.ನಾಣಯ್ಯ, ಉಪಾಧ್ಯಕ್ಷ ಕೆ.ಡಿ.ಮುತ್ತಪ್ಪ ಇತರರು ಹಾಜರಿದ್ದರು.