Advertisement

ಜನರ ಕಲ್ಯಾಣಕ್ಕೆ ಒಂದು ಅವಕಾಶ ನೀಡಿ

10:25 AM Jan 19, 2018 | Team Udayavani |

ಚಿಂಚೋಳಿ: ನನ್ನ ಆರೋಗ್ಯ ಹದಗೆಟ್ಟಿದ್ದರೂ ಅದನ್ನು ಕಡೆಗಣಿಸಿ ಜನರ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿದ್ದೇನೆ. ನನಗೂ ಒಂದು ಅವಕಾಶ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು. ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್‌ ವಿಕಾಸ ಯಾತ್ರೆ ಹಾಗೂ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಮ್ಮಿಶ್ರ ಸರಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ವಿಧಾನಸಭೆಯಲ್ಲಿ ಕೂಡದೇ ಗ್ರಾಮ ವಾಸ್ತವ್ಯ ಮಾಡಿ ಜನತೆ ಮತ್ತು ರೈತರ ಸಮಸ್ಯೆ ಕುರಿತು ಚರ್ಚಿಸಿದ್ದೇನೆ. ರೈತರ ಸಾಲ ಮನ್ನಾ ಮಾಡಿದ್ದೇನೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಮತ್ತೆ
ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ರೈತರ ಸಾಲಮನ್ನಾ ಮಾಡಲು ಸವಾಲು ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಹತ್ತಿಕ್ಕುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಕಚ್ಚಾಟ, ಟೀಕೆಯಲ್ಲೇ ಕಾಲಹರಣ ಮಾಡುತ್ತಿವೆ. ಎಂದಿಗೂ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಜನರ ಬಗ್ಗೆ ಕರುಣೆ ಇಲ್ಲ. ಕೇವಲ ಸುಳ್ಳು ಹೇಳುವುದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಎಚ್‌.ಡಿ. ದೇವೇಗೌಡ ಪ್ರಧಾನಮಂತ್ರಿ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 28 ಸಕ್ಕರೆ ಕಾರ್ಖಾನೆ ಮಂಜೂರು ಮಾಡಿದ್ದರು. ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಳೆದ 20 ವರ್ಷಗಳಿಂದ ಪ್ರಾರಂಭಗೊಳ್ಳದೇ ಸ್ಥಗಿತವಾಗಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಪಾರಂಭಿಸಲಾಗುವುದು. ಅಲ್ಲದೇ ಐನಾಪುರ ಏತ ನೀರಾವರಿ ಯೋಜನೆಗೆ 100 ಕೋಟಿ ರೂ. ಅನುದಾನ ನೀಡಿ ಕೇವಲ ಮೂರು ತಿಂಗಳಲ್ಲಿ ಸ್ವತಃ ನಾನೇ ಉದ್ಘಾಟಿಸುತ್ತೇನೆ ಎಂದು ಹೇಳಿದರು.

Advertisement

2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಮುಖ ನೋಡಿ ಜನತೆ ಮತ ನೀಡಿದರು.
ಕುಮಾರಸ್ವಾಮಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಟೀಕೆ ಮಾಡುತ್ತಿದ್ದಾರೆ. ನನಗೆ ಒಂದು ಸಲ ಅವಕಾಶ ನೀಡಿ, ನಿಮ್ಮ ಮನೆ ಮಗನಂತೆ ಸೇವಕನಾಗಿ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. 

2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು ಮೇ 2ರಂದು ನಡೆಯಲಿವೆ ಎನ್ನುವ ಮಾಹಿತಿ ಬಂದಿದೆ. ರಾಜ್ಯದಲ್ಲಿ
ಜೆಡಿಎಸ್‌ ಅ ಧಿಕಾರಕ್ಕೆ ಬರಬೇಕು ಎನ್ನುವುದು ನನ್ನ ಕನಸು. ಇದಕ್ಕೆ ನಿಮ್ಮ ಬೆಂಬಲ ಬೇಕು. ಜೆಡಿಎಸ್‌ ಕೇವಲ 65 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಮಾಧ್ಯಮಗಳ ಸಮೀಕ್ಷೆ ತಿಳಿಸಿವೆ. ಆದರೆ ನನಗೆ 113 ಸ್ಥಾನಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಎನ್‌. ಧರಂಸಿಂಗ್‌ ಮುಖ್ಯಮಂತ್ರಿಯಾಗಲು, ಡಾ| ಮಲ್ಲಿಕಾರ್ಜುನ ಖರ್ಗೆ ಸಚಿವರಾಗಲು ಸಹಕಾರ ನೀಡಿದ್ದೇವೆ. ಸಹಕಾರಿ ಬ್ಯಾಂಕ್‌ಗಳಲ್ಲಿದ್ದ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿಲ್ಲ. ಅಲ್ಲದೇ ರೈತರ ಖಾತೆಗೆ ಇನ್ನು ಹಣ ಜಮಾ ಆಗಿಲ್ಲ ಎಂದು ಆರೋಪಿಸಿದರು. ಹೈ.ಕ. ಪ್ರದೇಶದಲ್ಲಿ ಪೌಷ್ಟಿಕಾಂಶ ಕೊರತೆಯಿಂದಾಗಿ ತಾಯಿ ಮತ್ತು ಶಿಶುಗಳು ಮರಣವನ್ನಪ್ಪುತ್ತಿವೆ. ಇಂತಹ ಘಟನೆಗಳು ಆಗದಂತೆ ತಡೆಯಲು ಗರ್ಭಿಣಿಯರಿಗೆ ಆರು ಸಾವಿರ ರೂ. ಜತೆಗೆ ಪೌಷ್ಟಿಕ ಅಹಾರ ನೀಡುವ ಯೋಜನೆ ಜಾರಿಗೆ ತರುತ್ತೇನೆ ಎಂದು ಹೇಳಿದರು. 

ಜನರು ನೀಡಿದ ತೆರಿಗೆ ಹಣ ಬಳಸಿಕೊಂಡು ಹೈ.ಕ.ಪ್ರದೇಶದಲ್ಲಿರುವ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇನೆ ಎಂದು ಹೇಳಿದರು. ಮಾಜಿ ಸಚಿವ ಬಂಡೆಪ್ಪ ಖಾಶಂಪುರ, ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖುಬಾ, ನಶೀಮ್‌ ಪಟೇಲ್‌ ಹುಮನಾಬಾದ, ಜೆಡಿಎಸ್‌ ಅಭ್ಯರ್ಥಿ ಸುಶೀಲಮ್ಮ ಕೊರವಿ, ಎಂ.ಬಿ. ಅಂಬಲಗಿ, ಆರ್‌. ಆರ್‌.ಪಾಟೀಲ ಮಾತನಾಡಿದರು. ಶಿವಕುಮಾರ ಕೊಳ್ಳೂರು, ಕೃಷ್ಣಾರೆಡ್ಡಿ, ರಜಾಕ್‌ ಪಟೇಲ್‌, ಹಣಮಂತ ಪೂಜಾರಿ, ಸಿದ್ದಯ್ಯಸ್ವಾಮಿ, ವಿಶ್ವನಾಥ ಬೀರನಳ್ಳಿ, ಮಕಬೂಲಖಾನ್‌ ಟೇಲರ್‌, ಶಿವಕುಮಾರ ಶೇರಿಕಾರ, ಸಂಜೀವಕುಮಾರ ಪಾಟೀಲ ಭಾಗವಹಿಸಿದ್ದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರರೆಡ್ಡಿ ಸ್ವಾಗತಿಸಿದರು. ಶೇಖ್‌ ಭಕ್ತಿಯಾರ ವಂದಿಸಿದರು. 

ಪ್ರಧಾನಿಗೆ ಗೋವಾ ಮೇಲೆ ಅಪಾರ ಪ್ರೀತಿ: ಮಹದಾಯಿ ನದಿಯಿಂದ ನೀರು ಕೊಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ಜಿಲ್ಲೆಗಳ ರೈತರು ಕಳೆದ ಎರಡು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ನಮ್ಮ ರಾಜ್ಯದ 17 ಬಿಜೆಪಿ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಸ್ಯೆ ಇತ್ಯರ್ಥಪಡಿಸಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಗೋವಾ ರಾಜ್ಯದ ಮೇಲೆ ಅಪಾರ ಪ್ರೀತಿ, ಗೌರವವಿದೆ. ಅವರಿಗೆ ಕರ್ನಾಟಕ ಜನರ ಮೇಲೆ ಕರುಣೆಯೇ ಇಲ್ಲ. ಗೋವಾ ರಾಜ್ಯದ ನೀರಾವರಿ ಖಾತೆ ಸಚಿವರು ಮಹದಾಯಿ ಯೋಜನೆ ಬಗ್ಗೆ ಕೆಟ್ಟ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ರಾಜ್ಯ ಸರಕಾರ ಇದಕ್ಕೆ ಜವಾಬ್ದಾರಿತನದಿಂದ ಸ್ಪಷ್ಟೀಕರಣ ನೀಡಬೇಕಾಗಿದೆ. 
 ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next