Advertisement

ಮೈಸೂರು ನಗರಪಾಲಿಕೆ ಆಡಳಿತ ಜೆಡಿಎಸ್‌ಗೆ ಕೊಡಿ

12:07 PM Aug 28, 2018 | |

ಮೈಸೂರು: ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಮುಖ್ಯಮಂತ್ರಿ ಇರುವುದರಿಂದ ನಗರದ ಅಭಿವೃದ್ಧಿ ದೃಷ್ಟಿಯಿಂದ ಮೈಸೂರು ಮಹಾ ನಗರಪಾಲಿಕೆ ಆಡಳಿತವನ್ನು ಜೆಡಿಎಸ್‌ಗೆ ನೀಡುವಂತೆ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನಗರ ಜನತೆಯಲ್ಲಿ ಮನವಿ ಮಾಡಿದರು.

Advertisement

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು 545 ಕೋಟಿ ವೆಚ್ಚದ ಉಂಡವಾಡಿ ಕುಡಿಯುವ ನೀರು ಯೋಜನೆಯನ್ನು ಆಯವ್ಯಯದಲ್ಲೇ ಘೋಷಣೆ ಮಾಡಿಸಿ ಮಂಜೂರು ಮಾಡಿಸಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ.

ಜೊತೆಗೆ ಪಾಲಿಕೆ ಅಧಿಕಾರವನ್ನು ಜೆಡಿಎಸ್‌ಗೆ ನೀಡಿದಲ್ಲಿ ಬಿಬಿಎಂಪಿ ಮಾದರಿಯಲ್ಲಿ ಮೈಸೂರು ನಗರದ ಸುತ್ತಮುತ್ತಲ ಪ್ರದೇಶಗಳನ್ನು ಸೇರಿಸಿಕೊಂಡು ಬೃಹತ್‌ ಮೈಸೂರು ಮಹಾ ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ ನಗರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಮುಖ್ಯಮಂತ್ರಿಯನ್ನು ಒಪ್ಪಿಸುವುದಾಗಿ ಭರವಸೆ ನೀಡಿದರು.

ಎಚ್‌.ವಿಶ್ವನಾಥ್‌ ಮಾತನಾಡಿ, ಉಂಡವಾಡಿ ಕುಡಿಯುವ ನೀರು ಯೋಜನೆ ಅನುಷ್ಠಾನದಿಂದ ಮೈಸೂರು ನಗರದ ಕುಡಿಯುವ ನೀರಿನ ಬವಣೆ ನೀಗಲಿದೆ. ಜೊತೆಗೆ ಪೌರ ಕಾರ್ಮಿಕರಿಗೆ ವಿಶೇಷ ಸವಲತ್ತುಗಳನ್ನು ನೀಡಿ ಮೈಸೂರು ಮಹಾ ನಗರವನ್ನು ಮತ್ತೆ ದೇಶದ ನಂಬರ್‌ ಒನ್‌ ಸ್ವತ್ಛ ನಗರವನ್ನಾಗಿಸಲು ಪ್ರಯತ್ನಿಸಲಾಗುವುದು. ರಸ್ತೆ, ಕುಡಿಯುವ ನೀರು, ಶಾಲೆ, ಆಸ್ಪತ್ರೆ, ಪಶು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುವುದು.

ಮೈಸೂರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ರಚನೆಯೂ ನನೆಗುದಿಗೆ ಬಿದ್ದಿದ್ದು, ವಸ್ತುಪ್ರದರ್ಶನವನ್ನು ವರ್ಷ ಪೂರ್ತಿ ನಡೆಸುವುದರಿಂದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲವಾಗುವ ಜೊತೆಗೆ ನಗರದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಿ, ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.

Advertisement

ಈ ನಿಟ್ಟಿನಲ್ಲಿ ಜೆಡಿಎಸ್‌ ಕ್ರಮ ಕೈಗೊಳ್ಳಲಿದೆ. ಹೀಗಾಗಿ ಮೈಸೂರು ಮಹಾ ನಗರಪಾಲಿಕೆ ಅಧಿಕಾರವನ್ನಲ್ಲ, ಜವಾಬ್ದಾರಿಯನ್ನು ಕೊಡಿ ಎಂದು ಮೈಸೂರಿಗರನ್ನು ಕೇಳುತ್ತಿದ್ದೇವೆ. ಹಿಂದಿನ ಐದು ವರ್ಷ ಮೈಸೂರು ಮಹಾ ನಗರಪಾಲಿಕೆಯಲ್ಲಿ ಸಮ್ಮಿಶ್ರ ಆಡಳಿತವಿತ್ತು. ಸ್ವತಂತ್ರ ಅಧಿಕಾರವಿಲ್ಲದಿದ್ದರೆ ಅಭಿವೃದ್ಧಿ  ಕಷ್ಟ ಎಂದರು.

ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಕಗೊಂಡ ಬೆನ್ನಲ್ಲೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಧಿಕಾರಿಗಳ ಸಭೆ ಮಾಡಲಾಗಿಲ್ಲ. ಚುನಾವಣೆ ಮುಗಿದ ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಿಸಲಾಗುವುದು ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬರುತ್ತೆ ಎಂದು ಹೋರಾಟ ಮಾಡಿದೆವು. ಆದರೆ 37 ಸ್ಥಾನಗಳು ಮಾತ್ರ ಬಂದಿದ್ದರಿಂದ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಯಿತು. ಚುನಾವಣಾ ಪೂರ್ವದಲ್ಲಿ ಎಚ್‌.ಡಿ.ಕುಮಾರಸ್ವಾಮಿಯವರು ನೀಡಿದ ಭರವಸೆಗಳೆಲ್ಲವನ್ನೂ ಈಡೇರಿಸಲಾಗದಿದ್ದರೂ ಕೊಟ್ಟ ಮಾತಿನಂತೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಸಾಲಮನ್ನಾ ಮಾಡಿದ್ದಾರೆ ಎಂದರು.

ಹೈಕಮಾಂಡ್‌ ತೀರ್ಮಾನದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದು, ಮೈಸೂರು ನಗರದ ಜನತೆ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಅಚಲ ವಿಶ್ವಾಸವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next