ನೆಲಮಂಗಲ: ಗ್ರಾಮೀಣ ಭಾಗದಲ್ಲಿನ ಯುವ ಸಮುದಾಯ ಇತ್ತಿಚೀನ ದಿನಗಳಲ್ಲಿ ಗ್ರಾಮೀಣ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮೂಲಕ ಉತ್ತಮ ಕ್ರೀಡಾಪಟುಗಳನ್ನು ಪರಿಚಯಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಇ.ಕೃಷ್ಣಪ್ಪ ಅಭಿಪ್ರಾಪಟ್ಟರು.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಗೋವೇನಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ವಾಲಿಬಾಲ್ ಕ್ರೀಡಾಂಗಣಕ್ಕೆ ಹಾಗೂ ಸಮಾಜ ಸೇವಕ ದಿವಗಂತ ಶಿವಕುಮಾರ್ ಅವರ ಸವಿ ನೆನಪಿನಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಜೈ ಶ್ರೀರಾಮ್ ವಾಲಿಬಾಲ್ ಕಪ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರೀಕರಣದ ಪ್ರಭಾವದಿಂದ ಯುವ ಸಮುದಾಯ ಗ್ರಾಮೀಣ ಕ್ರೀಡಾ ಚಟುವಟಿಕೆಗಳಿಂದ ದೂರ ಸರಿದಿದ್ದರು. ಆದರೆ, ಕಳೆದ ಐದಾರು ವರ್ಷಗಳಿಂದ ದೇಸಿಯ ಆಟಗಳಿಗೆ ಆದ್ಯತೆ ನೀಡುವ ಮೂಲಕ ಆಟಗಾರರನ್ನು ತಯಾರು ಮಾಡಿ, ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕ್ರೀಡಾ ಕೂಟಗಳ ಆಯೋಜನೆಯಿಂದ ದೇಸಿಯ ಸಂಸ್ಕೃತಿಯನ್ನು ಉಳಿಸುತ್ತಿದ್ದಾರೆ ಎಂದರು.
ಉತ್ತಮ ಕ್ರೀಡಾಂಗಣ ನಿರ್ಮಾಣ: ಕ್ರೀಡಾಕೂಟದ ಆಯೋಜಕ ಡಾ. ಮಂಜುನಾಥ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕಳೆದ 30 ವರ್ಷದಿಂದ ವಾಲಿಬಾಲ್ ಪಂದ್ಯ ಆಡುತ್ತಿದ್ದಾರೆ. ಆದರೆ, ಸುಸಜ್ಜಿತವಾದ ಕ್ರೀಡಾಂಗಣ ಅಭಾವ ಹೆಚ್ಚಾಗಿತ್ತು. ಮಳೆ ಬಂದರೆ ಆಡಲು ಸಾಧ್ಯವಾಗುತ್ತಿರಲಿಲ್ಲ, ನಮ್ಮ ಶಾಸಕರ ಅನುದಾನ ಹಾಗೂ ಗ್ರಾಮಸ್ಥರ ಸಹಕಾರದಿಂದ ಉತ್ತಮ ಕ್ರೀಡಾಂಗಣ ನಿರ್ಮಿಸಿದ್ದೇವೆ. ನಮ್ಮ ತಂದೆ ಶಿವಕುಮಾರ್ ಅವರ ಸವಿನೆನಪಿನಲ್ಲಿ ಪ್ರತಿ ವರ್ಷವೂ ವಾಲಿಬಾಲ್ ಪಂದ್ಯಾವಳಿಗಳನ್ನು ನಡೆಸಿಕೊಂಡು ಹೋಗುತ್ತೇವೆ ಎಂದರು.
ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ: ಮೊದಲ ವರ್ಷದ ತಾಲೂಕುಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ 24 ತಂಡಗಳು ಭಾಗವಹಿಸಿವೆ. ಶನಿವಾರ ಮೊದಲ ಹಂತದ ಪಂದ್ಯಗಳು ನಡೆದಿವೆ. ಭಾನುವಾರ ಫೈನಲ್ ಪಂದ್ಯಾವಳಿ ನಡೆಯುತ್ತದೆ. ನಮ್ಮ ತಾಲೂಕಿನ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಲಾಗಿದೆ. ಮೊದಲ ಬಹುಮಾನ 50 ಸಾವಿರ, ದ್ವಿತೀಯ ಬಹುಮಾನ 30 ಸಾವಿರ, ತೃತೀಯ 20ಸಾವಿರ, ಚತುರ್ಥ ಸ್ಥಾನಕ್ಕೆ 10 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿ ವಿತರಿಸಲಾಗುತ್ತದೆ ಎಂದು ಕ್ರೀಡಾಕೂಟದ ಆಯೋಜಕ ಮೋಹನ್ ತಿಳಿಸಿದರು.
ಮುಖಂಡ ಶಿವಕುಮಾರ್, ಡಿ.ಸಿ.ಗೌಡ್ರು, ಜಿ.ಎಚ್.ಪ್ರಕಾಶ್, ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ನಿರ್ದೇಶಕ ನಾರಾಯಣಸ್ವಾಮಿ, ಹನುಮೇಗೌಡ, ಹನುಮಂತರಾಯಪ್ಪ, ಮಲ್ಲಿಕಾರ್ಜುನ್, ನಾರಾಯಣ್, ಮೋಹನ್, ಬೆಟ್ಟಪ್ಪ, ಮಂಜುನಾಥ್, ರಾಜೇಶ್ ಹಾಗೂ ಗ್ರಾಮದ ಯುವಕರು ಇದ್ದರು.