Advertisement

ಜಿಲ್ಲೆಗಳಲ್ಲಿ ಆಮ್ಲಜನಕ ಸರಬರಾಜಿನ ಬಗ್ಗೆ ಹೆಚ್ಚಿನ ಗಮನ ನೀಡಿ : ಸಚಿವ ಶೆಟ್ಟರ್‌ ಸೂಚನೆ

04:05 PM May 11, 2021 | Team Udayavani |

ಬೆಂಗಳೂರು : ರಾಜ್ಯದ ಜಿಲ್ಲೆಗಳಲ್ಲಿ ಆಮ್ಲಜನಕದ ಬೇಡಿಕೆಯ ಅನುಗುಣವಾಗಿ ಅದನ್ನು ಪೂರೈಸುವುದರ ಮೇಲೆ ಹೆಚ್ಚಿನ ಗಮನ ನೀಡುವ ಮೂಲಕ ಸಮರ್ಪಕ ಸರಬರಾಜು ಆಗುವಂತೆ ನೋಡಿಕೊಳ್ಳಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅಲ್ಲದೆ, ಇಂದು ರಾಜ್ಯಕ್ಕೆ ಆಗಮಿಸಿರುವ 6 ಕಂಟೇನರ್‌ ಆಮ್ಲಜನಕವನ್ನು ನೀಡಿದ ಕೇಂದ್ರ ಸರಕಾರಕ್ಕೆ ಆಭಿನಂದನೆ ಸಲ್ಲಿಸಿದ ಸಚಿವರು, ಮುಂದಿನ ದಿನಗಳಲ್ಲಿ ಇನ್ನೂ 4 ಕಂಟೇನರ್‌ ಆಮ್ಲಜನಕ ಸರಬರಾಜು ಆಗಲಿದೆ ಎಂದು ಹೇಳಿದರು.

ಇಂದು ವಿಧಾನಸೌಧದಲ್ಲಿ ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಮತ್ತು ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗಿನ ಸಭೆ ನಡೆಸಿದ ಅವರು, ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜಿನ ಕುರಿತ ಸಮಗ್ರ ಮಾಹಿತಿಯನ್ನ ಪಡೆದುಕೊಂಡರು. ರಾಜ್ಯಕ್ಕೆ ಇದುವರೆಗೂ ಸರಾಸರಿ 1015 ಮೆಟ್ರಿಕ್‌ ಟನ್‌ ನಷ್ಟು ಆಮ್ಲಜನಕವನ್ನು ನಿಯೋಜಿಸಲಾಗಿದೆ. ರಾಜ್ಯಕ್ಕೆ ವಿವಿಧ ಮೂಲಗಳಿಂದ ಅಗತ್ಯವಿರುಷ್ಟು ಪ್ರಮಾಣದ ಆಮ್ಲಜನಕ ಪೂರೈಕೆ ಆಗುತ್ತಿದೆ. ಆದರೆ, ಅದೇ ರೀತಿಯಲ್ಲಿ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರಬರಾಜನ್ನು ಕ್ರಮಬದ್ದಗೊಳಿಸುವಂತೆ ಸೂಚನೆ ನೀಡಿದರು.

ರಾಜ್ಯದ ಜಿಲ್ಲೆಗಳಿಗೆ ಅವುಗಳ ಬೇಡಿಕೆಯ ಅನುಗುಣವಾಗಿ ಸರಬರಾಜು ಆಗುವುದನ್ನು ನೋಡಿಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕು. 24 ಗಂಟೆಯೂ ಕೂಡಾ ಈ ಬಗ್ಗೆ ಮಾಹಿತಿಯನ್ನು ತರಿಸಿಕೊಂಡು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಯಾವುದೇ ಗೊಂದಲ ಅಥವಾ ಸಮಸ್ಯೆಗೆ ಎಡೆಮಾಡಿಕೊಡಬಾರದು ಎಂದು ಆಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಕೇಂದ್ರ ಸಚಿವರೊಂದಿಗಿನ ನಿರಂತರ ಸಮಾಲೋಚನೆ ಫಲಪ್ರದ: ಕೇಂದ್ರ ಸಚಿವರಾರ ಪಿಯೂಶ್‌ ಗೋಯೆಲ್‌, ಪ್ರಹ್ಲಾದ್‌ ಜೋಷಿ ಹಾಗೂ ಸದಾನಂದಗೌಡ ಅವರೊಂದಿಗೆ ನಡೆಸಿದ ನಿರಂತರ ಸಮಾಲೋಚನೆಯಿಂದಾಗಿ ಇಂದು ಕೇಂದ್ರ ಸರಕಾರ 6 ಕಂಟೇನರ್ ಗಳಲ್ಲಿ 120 ಮೆಟ್ರಿಕ್‌ ಟನ್‌ ನಷ್ಟ ದ್ರವೀಕೃತ ಆಮ್ಲಜನಕವನ್ನು ನೀಡಿದೆ. ಇದು ಬಹಳ ಅಭಿನಂದನೀಯ ವಿಷಯ. ಮುಂದಿನ ದಿನಗಳಲ್ಲಿ ಇನ್ನೂ 4 ಕಂಟೇನರ್‌ ಆಮ್ಲಜನಕ ನೀಡುವ ಭರವಸೆಯನ್ನು ಕೇಂದ್ರ ಸಚಿವರ ನೀಡಿದ್ದಾರೆ ಎಂದು ತಿಳಿಸಿದರು.

Advertisement

ಬಫರ್‌ ಸ್ಟೋರೇಜ್‌ ಹೊಂದಲು ಕ್ರಮ ಕೈಗೊಳ್ಳಿ: ರಾಜ್ಯದಲ್ಲಿ ಅನಿವಾರ್ಯ ಸಂಧರ್ಭಗಳಲ್ಲಿ ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತೆ ಬಫರ್‌ ಸ್ಟೋರೇಜ್‌ನ್ನು ಹೊಂದುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳೀದರು.

ಸಿಲಿಂಡರ್‌ ಹಾಗೂ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಒದಗಿಸಿ: ರಾಜ್ಯಕ್ಕೆ ಈಗ ಇನ್ನೂ ಹೆಚ್ಚಿನ ಸಿಲಿಂಡರ್‌ಗಳು ಹಾಗೂ ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಗಳ ಅವಶ್ಯಕತೆ ಇದೆ. ಇದುವರೆಗೂ ಕೇಂದ್ರ ಸರಕಾರದಿಂದ 320 ಸಿಲಿಂಡರ್‌ ಹಾಗೂ 400 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ನೀಡಿದ್ದಾರೆ. ನಾವು 7700 ಸಿಲಿಂಡರ್‌ ಹಾಗೂ 1000 ಆಕ್ಸಿಜನ್‌ ಕಾನ್ಸನ್‌ಟ್ರೇಟರ್‌ ಗೆ ಬೇಡಿಕೆ ಇಟ್ಟಿದ್ದು, ಕೇಂದ್ರ ಸರಕಾರದ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ ಜಾವೇದ್‌ ಆಖ್ತರ್‌, ಗಣಿ ಮತ್ತು ಎಂಎಸ್‌ಎಂಇ ಪ್ರಧಾನ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಬಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next