ಬೆಂಗಳೂರು: “ಉತ್ತರ ಕರ್ನಾಟಕ ಭಾಗದವರು ನನ್ನನ್ನು ನೇರವಾಗಿ ಭೇಟಿ ಮಾಡಲಿ. ಆ ಭಾಗದ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ನೇತೃತ್ವದಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದ ಪ್ರತ್ಯೇಕ ರಾಜ್ಯ ಹೋರಾಟಗಾರರೊಂದಿಗೆ ಅವರು ಚರ್ಚೆ ನಡೆಸಿದ ವೇಳೆ ಅವರು ಈ ಭರವಸೆ ನೀಡಿದರು. “ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸಲು ನನಗೆ ಒಂದು ವರ್ಷ ಸಮಯ ಕೊಡಿ, ಚುನಾವಣೆಯಲ್ಲಿ ಯಾರಿಗಾದರೂ ಮತ ಹಾಕಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. 15 ದಿನ ಮಾತ್ರ ಪ್ರತ್ಯೇಕತೆಯ ಕೂಗು ಇರುತ್ತದೆ. ಆ ಮೇಲೆ ಏನೂ ಇರುವುದಿಲ್ಲ. 2.18 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 500 ಕೋಟಿ ರೂ. ಮಾತ್ರ ಹಾಸನ, ಮಂಡ್ಯ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಕೊಟ್ಟಿದ್ದೇನೆ. ಅದನ್ನೇ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾರೆ.
ಯಾರು ಏನೇ ಹೇಳಿದರೂ ಕೇಳಬೇಡಿ, ಉತ್ತರ ಕರ್ನಾಟಕ ಭಾಗದವರು ನನ್ನನ್ನು ನೇರವಾಗಿ ಭೇಟಿ ಮಾಡಿ. ಶೀಘ್ರದಲ್ಲಿಯೇ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಎರಡು ದಿನ ವಾಸ್ತವ್ಯ ಹೂಡುತ್ತೇನೆ ಎಂದು ಕುಮಾರಸ್ವಾಮಿ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ. ಮಹದಾಯಿ ವಿಚಾರದಲ್ಲಿ ನಾನು ಯಾವುದೇ ರಾಜಕೀಯ ಮಾಡಿಲ್ಲ. ಯಾರೊಬ್ಬರ ಮೇಲೂ ಆರೋಪ ಮಾಡಿಲ್ಲ. ಮಹದಾಯಿ ಪ್ರಕರಣ ನ್ಯಾಯಾಧಿಕರಣದಲ್ಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅಥವಾ ಇನ್ನೊಬ್ಬರು ಈ ಬಗ್ಗೆ ತೀರ್ಮಾನ ಮಾಡಲು ಆಗುವುದಿಲ್ಲ. ನ್ಯಾಯಾಧೀಕರಣ ರಾಜ್ಯಕ್ಕೆ ನಿಗದಿ ಮಾಡುವ ನೀರಿನ ಸದ್ಬಳಕೆ ಮಾಡಿಕೊಳ್ಳುತ್ತೇವೆ. ನ್ಯಾಯಾಧೀಕರಣದ ತೀರ್ಪಿಗೆ ಕಾಯುತ್ತಿದ್ದೇವೆ ಎಂದರು.
ಮೈಸೂರು ಪ್ರಾಂತ್ಯಕ್ಕಿಂತ ಉ.ಕ. ಭಾಗದಲ್ಲಿ ನನಗೆ ಹೆಚ್ಚಿನ ಪ್ರೀತಿ ದೊರೆತಿದೆ. ಆ ಭಾಗದಲ್ಲಿ ಜೆಡಿಎಸ್‌ಗೆ ಶಕ್ತಿ ಇಲ್ಲ. ಬೇರೆಯವರ ಹಂಗಿನಲ್ಲಿ ನಾನು ಸರ್ಕಾರ ನಡೆಸುತ್ತಿರುವಾಗ ಸ್ವಲ್ಪ ಸಮಯ ಕೊಡಿ, ರೈತರ ಸಾಲ ಮನ್ನಾ ಗೊಂದಲವನ್ನು ನಿವಾರಿಸಿ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಎರಡು ದಿನ ಪ್ರವಾಸ ಮಾಡಿ ಸಮಸ್ಯೆಗಳನ್ನು ಆಲಿಸುತ್ತೇನೆ.
● ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ