ಬೆಂಗಳೂರು: ರಾಜ್ಯಸಭೆ ಚುನಾವಣೆ ಕಸರತ್ತು ಮುಗಿಯುವ ಬೆನ್ನಲ್ಲೇ ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಬಿಜೆಪಿಯಲ್ಲಿ ಅನೇಕ ವರ್ಷಗಳಿಂದ ಪಕ್ಷ ನಿಷ್ಠರಾಗಿದ್ದ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆ ಚುನಾವಣೆಗೆ ಅವಕಾಶ ಕಲ್ಪಿಸಿರುವಂತೆಯೇ ಕಾಂಗ್ರೆಸ್‌ನಲ್ಲೂ ಪಕ್ಷ ನಿಷ್ಠ ಕಾರ್ಯಕರ್ತರಿಗೂ ಅವಕಾಶ ನೀಡಬೇಕು. ಅದು ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಸಾಬೀತಾಗಬೇಕೆಂಬ ಒತ್ತಡಕ್ಕೆ ಕಾರಣವಾಗಿದೆ.
ಜತೆಗೆ, ಸೋತವರಿಗೆ ಮತ್ತು ಅಸಮಾಧಾನಿತರಿಗೆ ಅಥವಾ ಜಾತಿ, ಹಣ ಉಳ್ಳವರಿಗೆ ಅವಕಾಶ ಕಲ್ಪಿಸಬಾರದು. ಬಿಜೆಪಿಯಿಂದ ಪಾಠ ಕಲಿತು ಪಕ್ಷವನ್ನು ಗಟ್ಟಿಗೊಳಿಸಬೇಕೆಂಬ ಒತ್ತಡ ಕಾಂಗ್ರೆಸ್ ನಿಷ್ಠರಿಂದ ಬಂದಿದೆ. ಕಾರ್ಯಕರ್ತರ ಪಕ್ಷವಾಗಿ ಬಿಜೆಪಿ ಬೆಳೆದಂತೆ, ಕಾಂಗ್ರೆಸ್ ಕೂಡಾ ಕಾರ್ಯಕರ್ತರ ಮೂಲಕ ಪಕ್ಷವನ್ನು ಗಟ್ಟಿಗೊಳಿಸಿ ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ಈ ಬಾರಿ ಹಳಬರಿಗೆ ಅವಕಾಶ ನೀಡದೇ ಹೊಸಬರನ್ನು ಪರಿಗಣಿಸುವಂತೆ ಯುವ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಪಕ್ಷದ ನಾಯಕರ ಮುಂದೆ ಬೇಡಿಕೆ ಜೊತೆಗೆ ಹಳಬರ ಸಾಧನೆ ಪಟ್ಟಿಯನ್ನೂ ನೀಡುವಂತೆ ನಾಯಕರಿಗೆ ಒತ್ತಡ ಹೇರಲು ಮುಂದಾಗಿದ್ದಾರೆ.
ಪ್ರಸ್ತುತ ಸ್ಥಿತಿ: ಕಾಂಗ್ರೆಸ್‌ಗೆ ದೊರೆಯುವ ಎರಡು ಸ್ಥಾನಕ್ಕೆ ಡಜನ್‌ಗಟ್ಟಲೆ ಆಕಾಂಕ್ಷಿಗಳು ಅವಕಾಶಕ್ಕಾಗಿ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಹಿರಿಯ ನಾಯಕರು, ಮಾಜಿ ಸಚಿವರು, ಹಾಲಿ ನಿವೃತ್ತರಾಗುವವರು ಎಲ್ಲರೂ ಪರಿಷತ್ ಪ್ರವೇಶಿಸಲು ತಮ್ಮದೇ ಮಾನದಂಡ ಮುಂದಿಟ್ಟುಕೊಂಡು ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ವಿಧಾನ ಸಭೆಯಿಂದ ಪರಿಷತ್ತಿಗೆ ಖಾಲಿಯಾಗುವ ಏಳು ಸ್ಥಾನಗಳಲ್ಲಿ ಬಿಜೆಪಿಗೆ ನಾಲ್ಕು, ಕಾಂಗ್ರೆಸ್‌ಗೆ ಎರಡು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ದೊರೆಯಲಿದೆ.
ಅಲ್ಲದೆ ಪಕ್ಷ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಚ್ಚಿನ ಮತಗಳನ್ನು ಜೆಡಿಎಸ್ ಗೆ ನೀಡಲು ತೀರ್ಮಾನಿಸಿರುವುದರಿಂದ ಅದಕ್ಕೆ ಪ್ರತಿಯಾಗಿ ಜೆಡಿಎಸ್‌ನಿಂದ ಒಂದು ವಿಧಾನ ಪರಿಷತ್ ಸ್ಥಾನ ಪಡೆಯುವಂತೆಯೂ ಕೆಲವು ಆಕಾಂಕ್ಷಿಗಳು ಪ್ರತಿಪಕ್ಷದನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸಾಧನೆ ಪಟ್ಟಿ ಕೊಡಿ: ಈ ನಡುವೆ ಅನೇಕ ವರ್ಷಗಳಿಂದ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಪದಾಧಿಕಾರಿಗಳಾಗಿ, ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸಿದವರು ತಮ್ಮನ್ನು ಪರಿಷತ್ ಸ್ಥಾನಕ್ಕೆ ಪರಿಗಣಿಸುವಂತೆ ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಜತೆಗೆ ಕೆಲವು ಆಕಾಂಕ್ಷಿಗಳು ಈಗ ಮಾಜಿಗಳಾಗುತ್ತಿರುವ ಜಯಮ್ಮ, ಇಕ್ಬಾಲ್ ಅಹಮದ್ ಸರಡಗಿ, ಅಬ್ದುಲ್ ಜಬ್ಟಾರ್, ನಜೀರ್ ಅಹಮದ್ ಅವರ ಸಾಧನೆಯನ್ನು ಬಹಿರಂಗಪಡಿಸುವಂತೆ ಪಕ್ಷದ ನಾಯಕರ ಮುಂದೆ ಆಗ್ರಹಿಸುತ್ತಿದ್ದಾರೆ. ಎನ್‌ಆರ್‌ಸಿ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಪರಿಷತ್ ಸದಸ್ಯರು ಮಾಡಿದ್ದೇನು?
ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿದವರಿಗಾಗಿ ಹಾಗೂ ಅವರು ಪ್ರತಿನಿಧಿಸುವ ಸಮುದಾಯಗಳಿಗೆ ಮಾಡಿರುವ ಸಹಾಯ ಏನು ಎಂಬ ಹಲವಾರು ಪ್ರಶ್ನೆಗಳನ್ನು ನಾಯಕರ ಮುಂದಿಟ್ಟು ಟಿಕೆಟ್ ಆಕಾಂಕ್ಷಿ ಹಿರಿಯ ನಾಯಕರಿಗೆ ಸವಾಲೊಡ್ಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಜೂ.12 ರಂದು ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯುವ ಸಾಧ್ಯತೆ ಇದ್ದು, ಆ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಾಧ್ಯತೆ ಇದೆ.
* ಶಂಕರ ಪಾಗೋಜಿ