Advertisement

ನೀನು ನಾಚುತ್ತಾ ಕಾಫಿ ಕೊಡು, ಉಳಿದಿದ್ದು ನನಗೆ ಬಿಡು!

06:00 AM Sep 11, 2018 | |

ಪ್ರತಿಬಾರಿ ನಾನು ಗೆದ್ದಾಗ ಭಯವಾಗುತ್ತಿತ್ತು. ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ.

Advertisement

ಸೂರ್ಯನೆಂಬ ಪುಕ್ಕಲ, ರಾತ್ರಿಗೆ ಹೆದರಿ ಓಡಿ ಹೋಗಿದ್ದ. ಚಂದ್ರನದು ಪಾರ್ಟ್‌ಟೈಮ್‌ ಡ್ನೂಟಿ, ಅವನ ಸುಳಿವೂ ಇರಲಿಲ್ಲ. ನಕ್ಷತ್ರಗಳ ಬೆಳಕೊಂದು ಬೆಳಕೆ!? ಕಪ್ಪು ಗವ್ವೆಂದಿತ್ತು. ಅಂಗೈ ಬೆವರಿನಲ್ಲಿ ನಲುಗುತ್ತಿದ್ದ ನಿನ್ನ ಪತ್ರವನ್ನು ಅಂಥ ಕತ್ತಲಲ್ಲೂ ಒಂದೇ ಗುಕ್ಕಿಗೆ ಓದಿಬಿಟ್ಟೆ! ಪ್ರೀತಿಯ ಪಾಲಿಗೆ ಕಡು ಕತ್ತಲೆಯೂ ಅಂದು ಬೆಳಕಾಗಿತ್ತಾ? ಆ ಕತ್ತಲಲ್ಲೂ ನಿನ್ನ ಅಕ್ಷರಗಳಷ್ಟೇ ಹೊಳೆಯುತ್ತಿದ್ದವಾ? ಗೊತ್ತಿಲ್ಲ. ಪ್ರೀತಿಯ ಮುಂದೆ ಕತ್ತಲು ಬೆಳಕಿನದು ಯಾವ ಮಾತು ಬಿಡು…

“ಮುಂಜಾನೆಯ ನನ್ನೆಲ್ಲಾ ಕನಸುಗಳನ್ನು ಜೀವನಪೂರ್ತಿ ಸಿಂಗರಿಸುವ ಜವಾಬ್ದಾರಿಯನ್ನು ನಿನಗೆ ಗುತ್ತಿಗೆಯಾಗಿ ಕೊಡುತ್ತಿದ್ದೀನಿ ಕಣೋ ಹುಡುಗ…’ ಅನ್ನುವ ಸಾಲನ್ನು ಓದಿಕೊಂಡಾಗ ಈ ಬದುಕಿನಲ್ಲಿ  ಮೊದಲ ಬಾರಿಗೆ ಖುಷಿಯ ಅನುಭವವಾಯ್ತು. ನನ್ನ ಅಷ್ಟೆಲ್ಲಾ ಸೋಲುಗಳು ಇಂದು ದೊಡ್ಡ ಗೆಲುವನ್ನು ತಂದು ಕೊಟ್ಟವು. ಈ ಒಂದು ಗೆಲುವಿಗಾಗಿ ನಾನು ಎಂಥ ಸೋಲುಗಳಿಗಾಗಿಯೂ ಸಿದ್ಧನಿದ್ದೆ. ಸೋಲುತ್ತಾ ಹೋದೆ. ನಿಜಕ್ಕೂ ಗೆದ್ದಿದ್ದು ನಾನಾ? ಅಲ್ಲ ನಮ್ಮ ಪ್ರೀತಿ.

“ಬದುಕು ಈ ಮಟ್ಟಿಗೆ ಚೆಂದ ಎನಿಸಲು ಆರಂಭಿಸಿದ್ದು ನೀನು ಕಾಡಲು ಶುರುವಿಟ್ಟುಕೊಂಡ ಮೇಲೆಯೇ ಕಣೋ. ಪ್ರತಿಬಾರಿ ನಾನು ಗೆ¨ªಾಗ ಭಯವಾಗುತ್ತಿತ್ತು.ನನಗಾಗಿ ದೊಡ್ಡ ಸೋಲೊಂದು ಕಾದಿದೆ ಅನಿಸುತ್ತಿತ್ತು. ಆ ಸೋಲು ಕೂಡ ಇಷ್ಟೊಂದು ಸಿಹಿಯಾಗಿರುತ್ತದೆ ಅಂತ ಗೊತ್ತಿರಲಿಲ್ಲ. ಎದೆಯ ತಂಬೂರಿಯ ತಂತಿಗಳನ್ನು ಶೃತಿಗೊಳಿಸಿ ಇಟ್ಟಿದೀನಿ. ಒಮ್ಮೆ ನುಡಿಸಿ ಹೋಗು. ಯಾವ ಜನ್ಮದಲ್ಲೂ ಆ ನಾದದ ಗುಂಗು ಹೊರಟ ಹೋಗಬಾರದು ಕಣೋ…’ ಇಂತಹ ಸಾಲುಗಳನ್ನು ಬರೆದರೆ ನಾನಾದರೂ ಹೇಗೆ ಬದುಕಲಿ?

ನಾಳೆಯ ದಿನಗಳನ್ನು ನೆನೆಸಿಕೊಂಡರೆ ಅದೆಷ್ಟು ಪುಳಕ. ನನ್ನ ತೊಳುಗಳಲ್ಲಿ ನಿನ್ನ ಜೀಕಿಸಬೇಕು. ನಿನ್ನ ತೊಡೆಯ ಮೇಲೆ ನನ್ನೆಲ್ಲಾ ದುಗುಡಗಳನ್ನು ಆಚೆ  ಕಟ್ಟಿಟ್ಟು ಮಲಗಬೇಕು. ಮನೆ ಕಟ್ಟಿಸುವಾಗ ನೀನು ಕಿಚನ್‌ ವಿಷಯಕ್ಕೆ, ನಾನು ಬೆಡ್‌ರೂಮ್‌ ವಿಷಯಕ್ಕೆ ಜಗಳ ಕಾಯಬೇಕು. ನನ್ನಿಷ್ಟದ ಪಲಾವ್‌ಅನ್ನು ನೀನು ಮಾಡುವುದನ್ನು ಮುಂದೂಡಿ ರೇಗಿಸಬೇಕು. ಮಲ್ಲಿಗೆ ಹೂವನ್ನು ಮರೆತು ಬಂದು ಬೈಸಿಕೊಳ್ಳಬೇಕು. ನೋಡು, ನಾವು ಬದುಕಿಗೆ ಏನೆಲ್ಲಾವನ್ನು ಜೋಡಿಸಿಕೊಳ್ಳಬೇಕು. ಪರಸ್ಪರ ಒಪ್ಪಿಗೆ ಪತ್ರಗಳಿಗೆ ಸಹಿಯಾದ ಮೇಲೆ ಶಾಖೆ ತೆರೆಯಲು ತಡಮಾಡಬಾರದು. ನಾಳೆ ಬೆಳಗ್ಗೆ ಹೊತ್ತಿಗೆ ನನ್ನ ಅಪ್ಪಅಮ್ಮ ನಿಮ್ಮನೆಯಲ್ಲಿರುತ್ತಾರೆ. ನೀನು ಅವರಿಗೆ ನಾಚುತ್ತಾ ಕಾಫಿ ಕೊಡು, ಉಳಿದಿದ್ದನ್ನು ನನಗೆ ಬಿಡು! 

Advertisement

ಸದಾ. 

Advertisement

Udayavani is now on Telegram. Click here to join our channel and stay updated with the latest news.

Next