ರಬಕವಿ-ಬನಹಟ್ಟಿ: ರಬಕವಿಯ ನಗರದ ಸರ್ವೆ ನಂ. 64/1+2 ರಲ್ಲಿ ಅಂದಾಜು 100 ದಲಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡದೆ ಇರುವುದರಿಂದ ಈ ದಲಿತ ಕುಟುಂಬಗಳು ಜೀವನ ನಿರ್ವಹಿಸುವುದು ಕಠಿಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ನೀಡಿ ಹದಿನೈದು ದಿನಗಳ ಒಳಗಾಗಿ ನಿವೇಶನ ನೀಡದೆ ಹೋದರೆ ನಗರಸಭೆ ಹಾಗೂ ಸ್ಥಳೀಯ ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘದ ಮುಖಂಡ ಯಮನಪ್ಪ ಗುಣದಾಳ ಹೇಳಿದರು. ಸ್ಥಳೀಯ ನಗರಸಭೆ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮವಾದ ಸಂಘವು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಇಲ್ಲಿಯ 900ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ದಲಿತ ಕುಟುಂಬಗಳಿಗೆ ಮಾತ್ರ ನಿವೇಶನ ನೀಡಿಲ್ಲ. ಈ ಕುರಿತು ಇಲ್ಲಿಯ ಜನರು ಜಿಲ್ಲಾ ಧಿಕಾರಿಗಳಿಗೆ, ಪೌರಾಯುಕ್ತರಿಗೆ, ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.
ಬಾಗಲಕೋಟೆಯ ಪೊಲೀಸ್ ವರಿಷ್ಠಾಧಿಕಾರಿಗಳು ಕರೆದ ದಲಿತರ ಕುಂದುಕೊರತೆ ಸಭೆಯಲ್ಲೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ದಲಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಯಮನಪ್ಪ ಗುಣದಾಳ ತಿಳಿಸಿದರು.
ಮತ್ತೋರ್ವ ಮುಖಂಡ ಪರಶುರಾಮ ನೀಲನಾಯಕ ಮಾತನಾಡಿದರು. ನಿವೇಶನರಹಿತರಿಗೆ ಆದಷ್ಟು ಬೇಗನೆ ಹಕ್ಕು ಪತ್ರಗಳನ್ನು ನೀಡಬೇಕು, ನಕಾಶೆಯನ್ನು ತಿದ್ದುಪಡಿ ಮಾಡಿದ ಕಾರಣ ನಿವೇಶನಗಳನ್ನು ನೀಡಲು ವಿಳಂಬವಾಗಿದೆ. ಈ ಕುಟುಂಬಗಳಿಗೆ ಅನ್ಯಾಯವಾಗಲು ಕಾರಣರಾದ ನಗರಸಭೆಯ ಅ ಧಿಕಾರಿ ಮುಖೇಶ ಬನಹಟ್ಟಿಯವರನ್ನು ಅಮಾನತು ಮಾಡಬೇಕು. ನೊಂದ ಕುಟುಂಬಗಳಿಗೆ ನಿವೇಶನ ಗುರುತಿಸಿ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ತಮ್ಮ ಹಕ್ಕೊತ್ತಾಯಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮವಾದ ಕಾರ್ಯಕರ್ತರು ಮಂಡಿಸಿದರು. ಪ್ರತಿಭಟನಾಕಾರರು ರಬಕವಿಯ ಹೊಸ ಬಸ್ ನಿಲ್ದಾಣದಿಂದ ರಬಕವಿ ಬನಹಟ್ಟಿ ನಗರಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಪ್ರತಿಭಟನಾಕಾರರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸಂಘದ ಮುಖಂಡರಾದ ಶಾಮ ಕಾಳೆ, ಸುನೀಲ ಹರಿಜನ, ಸುರೇಶ ನಡುವಿನಮನಿ, ಮಾರುತಿ ಮಾದರ, ಯಮನಪ್ಪ ಮಹಾಜನ, ಕುಮಾರ ಬುದ್ನಿ ಸದಸ್ಯರು ಇದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮವಾದ ಸಂಘದ ಸದಸ್ಯರು ನೀಡಿದ ಮನವಿಯನ್ನು ಆಶ್ರಯ ಸಮಿತಿಯ ಮುಂಡಿಡಲಾಗುವುದು. ಸಮಿತಿಯ ಕೈಗೊಂಡ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗುವುದು.
ಅಶೋಕ ಗುಡಿಮನಿ,
ಪೌರಾಯುಕ್ತರು, ರಬಕವಿ ಬನಹಟ್ಟಿ ನಗರಸಭೆ