Advertisement

ನಾಗರಿಕ ಸಮಸ್ಯೆ ನಿವಾರಣೆಗೆ ಒತ್ತು ನೀಡಿ

09:45 AM Jun 26, 2018 | Team Udayavani |

ದಾವಣಗೆರೆ:ನಗರದ ನಾಗರಿಕರ ಸಮಸ್ಯೆ ನಿವಾರಣೆಗೆ ಒತ್ತುಕೊಟ್ಟು ಕೆಲಸ ಮಾಡಿ ಎಂದು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾಹನಗರಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿಗೆ ತಾಕೀತು ಮಾಡಿದರು.

Advertisement

ಸೋಮವಾರ, ತಮ್ಮ ಕ್ಷೇತ್ರದ ವಿವಿಧ ವಾರ್ಡ್‌ ಮುಖಂಡರು, ಪಾಲಿಕೆ ಮಾಜಿ ಸದಸ್ಯರೊಂದಿಗೆ ಪಾಲಿಕೆ ಕಚೇರಿಯಲ್ಲಿ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿಯವರನ್ನು ಭೇಟಿಯಾಗಿ ಮಾತನಾಡಿದ ಅವರು, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಅನೇಕ ಕಡೆಗಳಲ್ಲಿ 10 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. 

ಮೋಟಾರ್‌, ಪಂಪ್‌ ಸಮಸ್ಯೆ ಎಂದು ಹೇಳಲಾಗುತ್ತಿದೆ. ಇವೆಲ್ಲವನ್ನೂ ನಿವಾರಿಸಿ, ಜನರಿಗೆ ವಾರದಲ್ಲಿ 2 ಬಾರಿ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ವಹಿಸಿ ಎಂದು ಸೂಚಿಸಿದರು. ನಗರದ ಹಲವೆಡೆ ಒಣಗಿದ ಮರಗಳಿವೆ. ಇವುಗಳ ರೆಂಬೆ, ಕೊಂಬೆ ಆಗಿಂದಾಗ್ಗೆ ಬೀಳುತ್ತಿವೆ. ಮಳೆ, ಗಾಳಿಯಲ್ಲಿ ಮರಗಳೇ ಬುಡಸಮೇತ ನೆಲಕ್ಕುರುಳುವ ಆತಂಕ ಇದೆ. ಅಂತಹ ಮರಗಳನ್ನು ಗುರುತಿಸಿ, ತಕ್ಷಣ ಅವನ್ನು ತೆರವುಗೊಳಿಸಲು ಮುಂದಾಗಿ ಎಂದು ಅವರು
ಹೇಳಿದರು.

ಕಸದ ಸಮಸ್ಯೆಯಂತೂ ನಗರದಲ್ಲಿ ತೀವ್ರವಾಗಿ ಕಾಡುತ್ತಿದೆ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಆಗಿಂದಾಗ್ಗೆ ನೀವೂ ಸಹ ದಿಢೀರ್‌ ಭೇಟಿಕೊಟ್ಟು ಸ್ವಚ್ಛತೆ ಪರಿಶೀಲನೆ ಮಾಡಿ. ಇದರ ಜೊತೆಗೆ ನಗರದಲ್ಲಿರುವ ಹಂದಿಗಳ ಹಾವಳಿ ನಿಯಂತ್ರಣಕ್ಕೂ ಕ್ರಮ ವಹಿಸಿ ಎಂದು ಅವರು ಹೇಳಿದರು.

ಆಯುಕ್ತ ಮಂಜುನಾಥ ಆರ್‌. ಬಳ್ಳಾರಿ, ಹಾಲಿ ನಗರದಲ್ಲಿ ನೀರಿನ ಸಮಸ್ಯೆ ಇದೆ. ನದಿಯಲ್ಲೂ ನೀರಿನ ಹರಿವು ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಇತ್ತ ಕೆರೆಗಳಲ್ಲಿರುವ ನೀರು ಖಾಲಿಯಾಗಿದೆ. ಹೀಗಾಗಿಯೇ ಹಾಲಿ ರಾಜನಹಳ್ಳಿಯಿಂದ ದಿನಕ್ಕೆ 60 ಎಂಎಲ್‌ಡಿ ಮಾತ್ರ ನೀರೆತ್ತಲಾಗುತ್ತಿದೆ. ದಿನಕ್ಕೆ ನಮಗೆ 80 ಎಂಎಲ್‌ಡಿ ನೀರು ಬೇಕು. ಬರುವ 60 ಎಂಎಲ್‌ ಡಿಯಲ್ಲಿ 10 ಎಂಎಲ್‌ಡಿ ಕಲುಷಿತ ನೀರು ಸೇರಿರುತ್ತದೆ. ಅದನ್ನು ಹೊರತುಪಡಿಸಿ 50 ಎಂಎಲ್‌ಡಿ ಮಾತ್ರ ನಮಗೆ ಲಭ್ಯವಾಗುತ್ತಿದೆ. ಇದೇ ಕಾರಣಕ್ಕೆ ವಾರಕ್ಕೆ ಒಮ್ಮೆ ನೀರು ಕೊಡಲಾಗುತ್ತಿದೆ ಎಂದು ತಿಳಿಸಿದರು.

ಒಣ ಮರಗಳ ತೆರವು ಕಾರ್ಯಾಚರಣೆ ನಾಳೆಯಿಂದಲೇ ಆರಂಭವಾಗಲಿದೆ. ಇನ್ನು ಪಾರ್ಕ್‌ ನಿರ್ವಹಣೆ ಸಮಸ್ಯೆ ಇದೆ. ನಗರದಲ್ಲಿ 190 ಪಾರ್ಕ್‌ ಇವೆ. ಆದರೆ, ಸಿಬ್ಬಂದಿ ಇರುವುದು 40 ಮಂದಿ ಮಾತ್ರ. ಅವರೂ ಸಹ ನಿವೃತ್ತಿ ಅಂಚಿನಲ್ಲಿದ್ದಾರೆ. ಇದೇ ಕಾರಣಕ್ಕೆ ಪಾರ್ಕ್‌ಗಳ ನಿರ್ವಹಣೆಗೆ ಖಾಸಗಿ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಆಲೋಚಿಸಲಾಗಿದೆ. ಇದರ ಜೊತೆಗೆ ಸಂಘ, ಸಂಸ್ಥೆಗಳಿಗೂ ಪಾರ್ಕ್‌ ನಿರ್ವಹಣೆ ನೀಡಲು ಯೋಚಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು.

Advertisement

ಮಾಜಿ ಮೇಯರ್‌ ವಿಠಲ್‌, ಸದಸ್ಯ ಪಿ.ಎಸ್‌. ಜಯಣ್ಣ, ಮುಖಂಡರಾದ ಎ.ವೈ. ಪ್ರಕಾಶ್‌, ಬಿ.ಎಸ್‌. ಜಗದೀಶ್‌, ಶಿವರಾಜ ಪಾಟೀಲ್‌, ಮನು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next