Advertisement

Deepavali: ಪಟಾಕಿ ಬದಲಿಗೆ ಗೃಹೋಪಯೋಗಿ ವಸ್ತುಗಳ ಕೊಡಿ

07:57 AM Nov 10, 2023 | Team Udayavani |

ಬೆಂಗಳೂರು: ನಗರದಲ್ಲಿ ದೀಪಾವಳಿ ಬಂದರೆ ಸಾಕು ಪಟಾಕಿ ಚೀಟಿಗಳ ಸದ್ದು ಕೇಳಿ ಬರುತ್ತದೆ. ಪಟಾಕಿ ಜೊತೆಗೆ ಕೊಡುವ ಗಿಫ್ಟ್ ಗಾಗಿ ಮಹಿಳೆಯರು ವರ್ಷವಿಡೀ ಇಂತಿಷ್ಟು ಹಣವನ್ನು ಕಟ್ಟುತ್ತಾರೆ. ಈ ಚೀಟಿ ವ್ಯವಹಾರಗಳು ಪರೋಕ್ಷವಾಗಿ ಪಟಾಕಿಗಳ ಖರೀದಿಗೆ ಪ್ರೇರಣೆಯಾಗಿದ್ದವು. ಆದರೆ, ಈಗ ಚಿತ್ರಣ ಬದಲಾಗಿದೆ. ಚೀಟಿ ಗ್ರಾಹಕರೇ ಪಟಾಕಿ ಬದಲಿಗೆ ಗೃಹೋಪಯೋಗಿ ವಸ್ತುಗಳಿಗೆ ಬೇಡಿಕೆ ಇಡುತ್ತಿರುವ ಹೊಸ “ಟ್ರೆಂಡ್‌’ ಶುರುವಾಗಿದೆ.

Advertisement

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪಟಾಕಿ ಚೀಟಿ ವ್ಯವಹಾರ ಸರ್ವೇ ಸಾಮಾನ್ಯ. ಯುಗಾದಿ, ದಸರಾ ಹಾಗೂ ದೀಪಾವಳಿ ಹೆಸರಿನಲ್ಲಿ ಚೀಟಿ ವ್ಯವಹಾರಗಳು ನಡೆಯುತ್ತವೆ. ಪಟಾಕಿ ಜತೆಗೆ ಚಿನ್ನ ಅಥವಾ ಬೆಳ್ಳಿ ನಾಣ್ಯಗಳನ್ನು ಸಿಗುತ್ತದೆ ಎಂಬ ಕಾರಣಕ್ಕೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರು ಚೀಟಿ ಮೂಲಕ ಪ್ರತಿ ತಿಂಗಳು ಒಂದಿಷ್ಟು ಹಣ ಹೂಡುತ್ತಾರೆ. ಆ ಮೂಲಕ ಬರುವ ಪಟಾಕಿಗಳನ್ನು ಹೊಡೆಯುವುದು ವಾಡಿಕೆ. ಆದರೆ, ಈ ಬಾರಿ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾತ್ರ ಬಳಸಬೇಕು, ದಾಸ್ತಾನು ಮಾಡುವಂತಿಲ್ಲ, ಹೀಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದರಿಂದ ಪಟಾಕಿ ಬೇಡಿಕೆ ತುಸು ತಗ್ಗಿದೆ.

ಪಟಾಕಿಗೆ ಬೇಡಿಕೆ ಕಡಿಮೆ:

“ಈ ಮೊದಲು ನೇರವಾಗಿ ತಮಿಳುನಾಡಿನ ಶಿವಕಾಶಿ ಅಥವಾ ನಗರದಲ್ಲಿರುವ ಮಧ್ಯವರ್ತಿಗಳ ಮೂಲಕ ನೇರವಾಗಿ ಬಾಕ್ಸ್‌ ಗಟ್ಟಲೇ ಪಟಾಕಿಗಳನ್ನು ಖರೀದಿಸುತ್ತಿದ್ದೆವು. ಅದರಿಂದ ತಮಗೂ ಒಂದಿಷ್ಟು ಲಾಭವಾಗುತ್ತಿತ್ತು. ಆದರೆ, ದೀಪಾವಳಿ ಹೊಸ್ತಿಲಲ್ಲೇ ನಡೆದ ಪಟಾಕಿ ದುರಂತ, ನಂತರದಲ್ಲಿ ದಾಸ್ತಾನಿಗೆ ಬ್ರೇಕ್‌ ಹಾಕಿದ್ದು ಸೇರಿದಂತೆ ಹತ್ತಾರು ನಿರ್ಬಂಧಗಳನ್ನು ವಿಧಿಸಿದ್ದರಿಂದ ಮಳಿಗೆಯಿಂದಲೇ ನೇರವಾಗಿ ಗ್ರಾಹಕರಿಗೆ ಪಟಾಕಿ ಕೊಡಿಸುತ್ತೇವೆ. ಮಳಿಗೆ ಬಳಿ ಚೀಟಿದಾರರನ್ನು ಕರೆದುಕೊಂಡು ಹೋಗಿ, ಮೊತ್ತಕ್ಕೆ ಅನುಗುಣವಾಗಿ ಪಟಾಕಿ ಬಾಕ್ಸ್‌ ಕೊಡುತ್ತೇವೆ’ ಎಂದು ಪಟಾಕಿ ಚೀಟಿ ನಡೆಸುವ ನಾರಾಯಣ ತಿಳಿಸುತ್ತಾರೆ.

“ಈ ಮಧ್ಯೆ ಕೆಲ ಗ್ರಾಹಕರು ಕೆಂಪು ಪಟಾಕಿಗಳೇ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಅದನ್ನು ಕೊಡಲು ಸಾಧ್ಯವಿಲ್ಲ ಎಂದಿದ್ದೇವೆ. ಬದಲಿಗೆ ಬೇರೆ ವಸ್ತುಗಳನ್ನು ಕೇಳಿದ್ದಾರೆ. ಇನ್ನು ಕೆಲವರು ಎರಡು ಗಂಟೆ ಸಿಡಿಸಲು ಸಾವಿರಾರು ರೂ. ಪಟಾಕಿ ಯಾಕೆ ಬೇಕು? ಬದಲಿ ವಸ್ತುಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಕಳೆದ ಬಾರಿಯೇ ಈ ಅನುಭವವಾಗಿತ್ತು. ಹೀಗಾಗಿ ಈ ಬಾರಿ ಕಡಿಮೆ ಪಟಾಕಿ ಬಾಕ್ಸ್‌ಗಳ ಬುಕಿಂಗ್‌ (ಮಳಿಗೆ ಮಾಲಿಕರ ಬಳಿ) ಮಾಡಲಾಗಿದೆ. ಗ್ರಾಹಕರಿಗೆ ಒಂದು ಗ್ರಾಂ ಬೆಳ್ಳಿ ನಾಣ್ಯದ ಜತೆಗೆ ಬೇರೆ ಗೃಹೋಪಯೋಗಿ ವಸ್ತುಗಳ ಕೂಪನ್‌ ಕೊಡುತ್ತಿದ್ದೇವೆ’ ಎಂದೂ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ನಾರಾಯಣ ಮಾಹಿತಿ ನೀಡಿದರು.

Advertisement

ಆನ್‌ಲೈನ್‌ನಲ್ಲೂ ಪಟಾಕಿಗಳು ಲಭ್ಯ:

ಇ-ಕಾಮರ್ಸ್‌ ವೇದಿಕೆಗಳಲ್ಲೂ ಪಟಾಕಿಗಳು ಮಾರಾಟಕ್ಕಿವೆ. ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳನ್ನೇ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಈ ವೇದಿಕೆಗಳ ಮೇಲೆ ನಿಗಾ ವಹಿಸುವುದು ಕಷ್ಟದ ಕೆಲಸ. ಆದರೂ, ನಮ್ಮ ಐಟಿ ವಿಭಾಗದ ಸಿಬ್ಬಂದಿಗೆ ಇ-ಕಾಮರ್ಸ್‌ ವೆಬ್‌ಸೈಟ್‌ ಗಳ ಮೇಲೆ ಕಣ್ಗಾವಲು ಇಡುವಂತೆ ಸೂಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪಟಾಕಿ ಮಾದರಿಯ ಚಾಕೋಲೇಟ್‌!

ಇ-ಕಾಮರ್ಸ್‌ ವೇದಿಕೆಯಲ್ಲಿ ಪಟಾಕಿ ಬುಕ್‌ ಮಾಡಿದಾಗ ಪಟಾಕಿ ಮಾದರಿಯ ಚಾಕೋಲೇಟ್‌ಗಳು ಬಂದಿವೆ. ಇ-ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಕ್ರ್ಯಾಕರ್ ಅಂತ ಟೈಪ್‌ ಮಾಡಿ, ಎಲ್ಲ ಮಾದರಿಯ ಎರಡೆರಡು ಪಟಾಕಿಗಳಿರುವ ಬಾಕ್ಸ್‌ ಬುಕ್‌ ಮಾಡಲಾಗಿತ್ತು. ಆದರೆ, ಮನೆಗೆ ಬಂದ ಬಾಕ್ಸ್‌ ತೆರೆದಾಗ ಪಟಾಕಿ ಮಾದರಿಯ ಚಾಕೋಲೇಟ್‌ ಇದ್ದವು. ಅದನ್ನು ವಾಪಸ್‌ ಕಳುಹಿಸಿ, ಅಸಲಿ ಹಸಿರು ಪಟಾಕಿ ತರಿಸಿಕೊಂಡಿದ್ದೇವೆ ಎಂದು ಗ್ರಾಹಕರೊಬ್ಬರು ಮಾಹಿತಿ ನೀಡಿದರು.

320 ಪಟಾಕಿ ಮಳಿಗೆ ತೆರೆಯಲು ಅವಕಾಶ

ನಗರದ 62 ಬಿಬಿಎಂಪಿ ಮೈದಾನಗಳಲ್ಲಿ 320 ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಮಳಿಗೆ ಮಾಲಿಕರಿಗೆ ಹಸಿರು ಪಟಾಕಿಯ ನಿಬಂಧನೆಗಳು, ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next