Advertisement

ಎಲ್ಲ ಭಾಷೆಗೆ ಸಮಾನ ಹಕ್ಕು ನೀಡಿ

03:16 PM Sep 15, 2020 | Suhan S |

ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತಂದ ಹಿಂದಿ ದಿವಸ್‌ ಆಚರಣೆ ಖಂಡಿಸಿ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

Advertisement

ನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಡಿಸಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ ನಡೆಸಿದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ಈಗ ಆಡಳಿತ ಭಾಷೆಯಾಗಿ ಹಿಂದಿ ಹೇರಿಕೆ ಮಾಡಿ ಹಂತ ಹಂತವಾಗಿ ಪ್ರಾದೇಶಿಕ ಭಾಷೆಗಳನ್ನು ಕೊಲ್ಲುವ ಯತ್ನ ನಡೆಸುತ್ತಿರುವುದು ಖಂಡನೀಯ ಎಂದರು.

ಸೆ.14ರಂದು ಹಿಂದಿ ದಿವಸ್‌ ಆಚರಣೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು.ಅದನ್ನು ಭಾರತೀಯ ಭಾಷಾ ದಿನವನ್ನಾಗಿ ಆಚರಿಸಬೇಕು. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳನ್ನು ಅಧಿಕೃತ ಸಂಪರ್ಕ ಭಾಷೆಗಳನ್ನಾಗಿಮಾಡಬೇಕು. ಶಿಕ್ಷಣ, ಉದ್ಯೋಗದ  ವಿಚಾರದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ವಿನೋದರೆಡ್ಡಿ, ಕೊಂಡಪ್ಪ, ವಿಷ್ಣು ಪ್ರಸಾದ್‌ ಯಾದವ್‌, ಶರಣಪ್ಪ ಆಟೋ, ಸಾದಿಕ್,ಫಿರೋಜ್‌, ರಮೇಶ, ವೆಂಕಟೇಶ, ಸುರೇಶ, ಪ್ರಕಾಶ ಇತರರಿದ್ದರು. ಕರ್ನಾಟಕ ಜನ ಸೈನ್ಯ: ಇದೇ ವಿಚಾರವಾಗಿ ಕರ್ನಾಟಕ ಜನ ಸೈನ್ಯ ಸಂಘಟನೆ ಸದಸ್ಯರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಹಿಂದಿ ದಿವಸ್‌ ಆಚರಿಸುವ ಮೂಲಕ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾಗಿದೆ.ದಕ್ಷಿಣ ಭಾರತದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆಶೈಕ್ಷಣಿಕವಾಗಿ ಒತ್ತಾಯಪೂರ್ವಕವಾಗಿ ಹಿಂದಿಭಾಷೆ ಕಲಿಯುವಂತೆ ಮಾಡುತ್ತಿರುವುದು ಖಂಡನೀಯ. ದಕ್ಷಿಣ ಭಾರತದ ಮಕ್ಕಳಿಗೆ ತ್ರಿಭಾಷಾ ನೀತಿ ಜಾರಿಗೆ ತಂದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಒತ್ತಡ ಹಾಕುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.

ಉತ್ತರ ಭಾರತದಲ್ಲಿ ಹೆಚ್ಚಾಗಿ ಹಿಂದಿ ಬಳಸುವುದರಿಂದ ಅಲ್ಲಿ ಬೇಕಾದರೆ ಆಚರಿಸಿಕೊಳ್ಳಲಿ. ಆದರೆ, ದಕ್ಷಿಣ ಭಾರತದಲ್ಲಿ ಪ್ರತಿ ರಾಜ್ಯಕ್ಕೂ ತನ್ನದೆಯಾದ ಪ್ರಾದೇಶಿಕ ಭಾಷೆ ಇದ್ದು, ಅದಕ್ಕೆ ಐತಿಹಾಸಿಕ ಹಿನ್ನೆಲೆ ಕೂಡ ಇದೆ. ಹಿಂದಿ ದಿವಸ್‌ವನ್ನು ದಕ್ಷಿಣ ಭಾರತ ರಾಜ್ಯಗಳಿಗೆ ಕಡ್ಡಾಯಗೊಳಿಸಬಾರದು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು.

ಸಂಘಟನೆ ಜಿಲ್ಲಾಧ್ಯಕ್ಷ ವೆಂಕಟೇಶ ಅರಗೋಲ, ಪದಾಧಿಕಾರಿಗಳಾದ ಶಾಂತಕುಮಾರ, ಪ್ರಸಾದ ಭಂಡಾರಿ, ವೆಂಕಟಸ್ವಾಮಿ, ಬಸವರಾಜ ಕ್ಯಾದಿಗೇರಾ, ವೀರಣ್ಣ ಶೆಟ್ಟಿ ಭಂಡಾರಿ, ಹುಸೇನ್‌, ಸಂದೀಪ, ರಮೇಶ, ಭೀಮೇಶ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next