ಹುಬ್ಬಳ್ಳಿ: ಪಾಲಿಕೆ ಆಯ-ವ್ಯಯದಲ್ಲಿ ಬಿಬಿಎಂಪಿ ಮಾದರಿಯಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಿ, ಸಾರ್ವಜನಿಕ ಮೂತ್ರಾಲಯಗಳ ನಿರ್ಮಿಸಲು ಗಮನ ನೀಡಿ, ಉದ್ಯಾನವನ ಸೇರಿದಂತೆ ಮೂಲಭೂತ ಸೌಕರ್ಯ, ಘನತ್ಯಾಜ್ಯ ನಿರ್ವಹಣೆ, ಆಶ್ರಯ ಕಾಲೋನಿಗೆ ಪ್ರತ್ಯೇಕ ಯೋಜನೆ, ಪರಿಶಿಷ್ಟ ಜಾತಿ, ಪಂಗಡ ಕಾಲೋನಿಗಳ ಅಭಿವೃದ್ಧಿಗೆ ಒತ್ತು ನೀಡುವಂತೆ ಸಾರ್ವಜನಿಕರು ಸಲಹೆ ನೀಡಿದರು.
ಮಹಾನಗರ ಪಾಲಿಕೆಯ 2017-18ನೇ ಸಾಲಿನ ಆಯ-ವ್ಯಯ ಕುರಿತು ಸಾರ್ವಜನಿಕರಿಂದ ಸಲಹೆ ಪಡೆಯುವ ನಿಟ್ಟಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅನೇಕರು ಸಲಹೆಗಳನ್ನು ನೀಡಿದರು. ಸರಕಾರಿ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಬಿ.ಎ. ಪಾಟೀಲ ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ.
ಇಲ್ಲಿಯೂ ಅನುದಾನ ಮೀಸಲಿಡಬೇಕು. ಹು.ಧಾ. ಒನ್ ಕೇಂದ್ರದಲ್ಲಿ ಬಿಲ್‌ಗಳ ಪಾವತಿಗೆ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ಕಲ್ಪಿಸಬೇಕು ಎಂದರು. ನಿವೃತ್ತ ಶಿಕ್ಷಕ ಧರಣೆಪ್ಪನವರ ಮಾತನಾಡಿ, ಇಂದಿರಾ ಗಾಜಿನ ಮನೆ ಆವರಣದಲ್ಲಿನ ಮಹಾತ್ಮಾಗಾಂಧಿ ಉದ್ಯಾನವನದ ನಿರ್ವಹಣೆ ಇಲ್ಲವಾಗಿದೆ. ಉದ್ಯಾನವನ ಮುಂದೆ ಗಾಂಧೀಜಿ ಪ್ರತಿಮೆ ಸ್ಥಾಪಿಸಬೇಕು ಎಂದರು.
ಪ್ರೇಮನಾಥ ಚಿಕ್ಕತುಂಬಳ ಮಾತನಾಡಿ, ಆಶ್ರಯ ಬಡಾವಣೆಗಳಿಗೆ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಯೋಜನೆ ರೂಪಿಸಬೇಕು. ಆಯ-ವ್ಯಯದಲ್ಲಿ ಶೇ.10ರಷ್ಟು ಹಣವನ್ನು ಮೀಸಲಿಡಿ ಎಂದರು. ಗಂಗಾಧರ ಪೆರೂರು ಮಾತನಾಡಿ, ಡಾ| ಜಗಜೀವನರಾಮ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಮೀಸಲಿಡಿ, ಡಾ| ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ, ಪರಿಶಿಷ್ಟ ಜಾತಿ-ಪಂಗಡ ಕಾಲೋನಿಗಳಲ್ಲಿ ಜಿಮ್ ನಿರ್ಮಾಣಕ್ಕೆ 10 ಲಕ್ಷ ರೂ. ಮೀಸಲಿಡಿ ಎಂದು ಒತ್ತಾಯಿಸಿದರು.
ಶರಣಪ್ಪ ದೊಡ್ಡಮನಿ ಮಾತನಾಡಿ, ಪಾಲಿಕೆ ವರಮಾನಕ್ಕೆ ತಕ್ಕದಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಿ. ಹಣ ಇಲ್ಲದೆ ಕಾಮಗಾರಿ ಕೈಗೊಂಡರೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರು ತೊಂದರೆ ಪಡಬೇಕಾಗುತ್ತದೆ. ನಾಲ್ಕು ತಿಂಗಳಾದರೂ ಬಿಲ್ ಪಾವತಿ ಮಾಡಿಲ್ಲ. ಡಿಸೆಂಬರ್ ತಿಂಗಳೊಂದರಲ್ಲೇ ಸುಮಾರು 4 ಕೋಟಿ ರೂ. ಬಾಕಿ ಇದೆ. ಅದೇ ರೀತಿ ಶುಲ್ಕ ಪಾವತಿಸಿ ಬಳಕೆ ಮಾಡುವ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೂ ಹಣ ಪಡೆಯಲಾಗುತ್ತಿದೆ ಎಂದರು.
ಮುರಳಿ ಕರ್ಜಗಿ, ಬಿ.ಸಿ. ಹಿರೇಮಠ, ಸಂಜೀವ ದುಮ್ಮಕನಾಳ, ಶ್ರೀಕಾಂತ ಕಬಾಡೆ, ಆನಂದ ಪಾಂಡುರಂಗಿ ಇನ್ನಿತರರು ಮಾತನಾಡಿದರು. ಮಹಾಪೌರ ಮಂಜುಳಾ ಅಕ್ಕೂರ, ಪಾಲಿಕೆ ಕಂದಾಯ ವಿಭಾಗ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಪರಿಷತ್ ಕಾರ್ಯದರ್ಶಿ ಪ್ರಕಾಶ ಗಾಳೆಮ್ಮನವರ, ಮುಖ್ಯಲೆಕ್ಕಾಧಿಕಾರಿ ಸೇರಿದಂತೆ ಇತರರು ಇದ್ದರು.