Advertisement

ಒಳಚರಂಡಿ ಕಾಮಗಾರಿ ಥರ್ಡ್‌ ಪಾರ್ಟಿ ಪರಿಶೀಲನೆಗೆ ನೀಡಿ

11:30 AM May 12, 2022 | Team Udayavani |

ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಯನ್ನು ಮೂರನೇ ಸಂಸ್ಥೆ (ಥರ್ಡ್‌ ಪಾರ್ಟಿ)ಯಿಂದ ಪರಿಶೀಲನೆಗೆ ಒಳಪರಿಸಬೇಕೆಂದು ಶಾಸಕ ಎಚ್‌. ಕೆ.ಪಾಟೀಲ ಸೂಚನೆ ನೀಡಿದರು.

Advertisement

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಅವಳಿ ನಗರ ವ್ಯಾಪ್ತಿಯ ಒಳಚರಂಡಿ ಯೋಜನೆ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌ ವೇಳೆ ಹಳೆ ಗದುಗಿನಲ್ಲಿ ಎಷ್ಟು ಸಂಪರ್ಕ, ಹೊಸ ಬಡಾವಣೆ ಹಾಗೂ ಲೇಔಟ್‌ಗಳಲ್ಲಿ ಎಷ್ಟು ಸಂಪರ್ಕ ಮಾಡಿದ್ದಾರೆ ಎಂಬುದರ ಮಾಹಿತಿಯೂ ಸಂಗ್ರಹಿಸಬೇಕು. ಕಾಮಗಾರಿ ಟೆಂಡರ್‌ ಪಡೆದ ಗುತ್ತಿಗೆದಾರರಿಗೆ ನಿಗದಿಪಡಿಸಿದ್ದ ಅವಧಿ ಮುಗಿದಿದ್ದರೂ ವಿಳಂಬ ಮಾಡಿದ್ದಕ್ಕೆ ದಂಡ ಎಷ್ಟು ಹಾಕಬೇಕಿತ್ತು. ಯಾಕೆ ವಿಧಿಸಿಲ್ಲ? ಎಂಬುದರ ಬಗ್ಗೆಯೂ ವರದಿ ನೀಡಬೇಕು. ಜೊತೆಗೆ ಕಾಮಗಾರಿ ವೇಳೆ ತೆಗೆದಿದ್ದ ಗುಂಡಿ ಮುಚ್ಚದಿರುವುದು(ಎಷ್ಟು ಕಿ.ಮೀ. ಉದ್ದ), ಅದಕ್ಕೆ ತಗಲುವ ವೆಚ್ಚದ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಅಂದಾಗ ಮಾತ್ರ ಹೆಚ್ಚುವರಿ ಬೇಡಿಕೆ ಹಾಗೂ ಕಾಮಗಾರಿ ಸ್ಥಿತಿ-ಗತಿ ಅರಿಯಲು ಸಾಧ್ಯವಾಗುತ್ತದೆ ಎಂದರು.

ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದಂತೆ 44,447 ಗೃಹ ಸಂಪರ್ಕ ಜೋಡಣೆ ಪೈಕಿ 29,520 ಮನೆಗಳಿಗೆ ಸಂಪರ್ಕ ನೀಡಲಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈ ಅಂಕಿಅಂಶಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಮಾತನಾಡಿ, 150 ಕೋಟಿ ರೂ. ವೆಚ್ಚದ ಯೋಜನೆ 180 ಕೋಟಿ ರೂ. ತಲುಪಿದ್ದು, ಕಾಮಗಾರಿ ಪೂರ್ಣಗೊಳಿಸಲು ಮೊದಲು ಆದ್ಯತೆ ನೀಡಬೇಕು. ಬಾಕಿ ಉಳಿದ ಮನೆ ಸಂಪರ್ಕ ಜೋಡಣೆ ಪೂರ್ಣಗೊಳಿಸಬೇಕು. ಒಳಚರಂಡಿ ಕಾಮಾಗಾರಿಯ 7.5 ಕಿ.ಮೀ. ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಟೆಂಡರ್‌ನಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಮುಗಿಸಲು ಆದ್ಯತೆ ನೀಡಬೇಕೆಂದು ಆದೇಶಿಸಿದರು.

Advertisement

ಅವಳಿ ನಗರದಲ್ಲಿ ಮೂರು ಹಂತದಲ್ಲಿ ಒಳಚರಂಡಿ ಕಾಮಗಾರಿ ನಡೆದಿದೆ. ಮೊದಲನೇ ಹಂತದಲ್ಲಿ 75 ಕಿ.ಮೀ. ಒಳಚರಂಡಿ ಕಾಮಗಾರಿ 11.14 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆಗೊಂಡು ಇದೀಗ ಪೂರ್ಣಗೊಂಡಿದೆ. ಕೇಂದ್ರ ಪುರಸ್ಕೃತ ಅಮೃತ ಯೋಜನೆಯಡಿ ಎರಡು ಹಾಗೂ ಮೂರನೇ ಹಂತದ ಕಾಮಗಾರಿ ನಡೆದಿವೆ. ಎರಡನೇ ಹಂತದಲ್ಲಿ 160. ಕಿ.ಮೀ. ಕಾಮಗಾರಿ ಇತ್ತು. ಅದು 161.78 ಕಿ.ಮೀ.ನಷ್ಟಾಗಿದೆ. ಎರಡನೇ ಹಂತದ 151 ಕೋಟಿ ರೂ. ವೆಚ್ಚದ ಯೋಜನೆ ಇದೀಗ ಹೆಚ್ಚುವರಿ ಕಾಮಗಾರಿ ಸೇರಿ ಇನ್ನೂ 30 ಕೋಟಿ ರೂ. ಅಗತ್ಯವಿದೆ.

ಈ ಬಗ್ಗೆ ಮೇಲಧಿಕಾರಿಗಳ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರನೇ ಹಂತದ ಕಾಮಗಾರಿಯೂ ನಡೆಯುತ್ತಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಹೊಸಮನಿ ಸಭೆಗೆ ಮಾಹಿತಿ ಒದಗಿಸಿದರು.

ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆ ಸದಸ್ಯರು, ಪ್ರಭಾರಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗುರುಪ್ರಸಾದ, ನಗರಸಭೆ ಅಧಿಕಾರಿಗಳು, ಸದಸ್ಯರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next