ಅಫಜಲಪುರ: ಕಡಣಿ ಬಳಿ ಕಳೆದ ಎರಡು ದಿನದ ಹಿಂದೆ ಖಾಸಗಿ ಬಸ್ ಉರುಳಿ ಸ್ಥಳದಲ್ಲೇ ಮೃತಪಟ್ಟಿದ್ದ ಹಾವನೂರ ಗ್ರಾಮದ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ 10ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಮಾಜ ಸೇವಕ ಜೆ.ಎಂ. ಕೊರಬು ಆಗ್ರಹಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ 30ಕ್ಕೂ ಹೆಚ್ಚು ಜನರು ಕಲಬುರಗಿಯ ಜಿಮ್ಸ್ ಹಾಗೂ ಧನ್ವಂತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ವಿಚಾರಿಸಿ, ಹಣ್ಣುಹಂಪಲು ವಿತರಿಸಿ, ಹಣಕಾಸಿನ ನೆರವು ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ದರು.
ಜೆ.ಎಂ. ಕೊರಬು ಫೌಂಡೇಶನ್‌ದಿಂದ ಗಾಯಾಳುಗಳಿಗೆ ಕೈಲಾದಷ್ಟು ಸಹಾಯ ಮಾಡಲಾಗುವುದು. ಜಿಲ್ಲಾಡಳಿತವೂ ನಿರ್ಲಕ್ಷ್ಯ ವಹಿಸದೇ ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸಲು ಸೂಚಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಮಾತನಾಡಿ, ರುದ್ರವಾಡಿ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಈ ಘಟನೆ ಸಂಭವಿಸಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿ ಗಾಯಾಳುಗಳ ನೆರವಿಗೆ ನಿಲ್ಲಬೇಕು. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಲು ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಮಹಾರಾಯ ಅಗಸಿ, ಬಸವರಾಜ ಸಪ್ಪನಗೋಳ್, ಶಿವಶಂಕರ ಪಾಸೋಡಿ, ಕನಕ ಟೇಲರ್, ಮಹಾಂತೇಶ ಬಳೂಂಡಗಿ, ಶಿವಶಂಕರ ಪಾಸೋಡಿ, ರವಿ ಗೌರ, ಸಾತಲಿಂಗಪ್ಪ ಲೋಣಿ, ಸಂಗಮನಾಥ ಹೂಗಾರ, ಸೂಗಪ್ಪ ರೆಡ್ಡಿ, ಶ್ರೀಮಂತ ಟಾಳಿ, ಸಂತೋಷ ಗಂಜಿ, ಭೀಮಾಶಂಕರ ಬಿರಾದಾರ, ಅಘೋಗಿ ಶಿವೂರ, ಭಾಗಣ್ಣಾ ಚಿಂಚೋಳಿ, ನಾಗೇಶ ಸಾಲೋಟಗಿ, ಹಿರಿಗಪ್ಪ ಜಿಡ್ಡಿಮನಿ ಹಾಗೂ ಇನ್ನಿತರರು ಇದ್ದರು.