ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ತಮ್ಮ ಹೆಸರಲ್ಲಿ ಸ್ಮಾರಕ ನಿರ್ಮಿಸಿದ ಬಿಎಸ್‌ಪಿ ಮಾಯಾವತಿ 2,600 ಕೋಟಿ ರೂ. ಮೊತ್ತ ವಾಪಸ್ ಮಾಡಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಈ ಶುಕ್ರವಾರ ಈ ಆದೇಶ ನೀಡಿದೆ. ಮುಂದಿನ 2007 ಮತ್ತು 2012ರ ನಡುವೆ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ನೋಯ್ಡಾ, ಲಕ್ನೊಗಳಲ್ಲಿ ಈ ಸ್ಮಾರಕಗಳನ್ನು ನಿರ್ಮಿಸಿದ್ದರು. ಜತೆಗೆ ಪಕ್ಷದ ಸಂಸ್ಥಾಪಕ ಕಾನ್ಶೀರಾಂ, ಬಿಎಸ್‌ಪಿ ಚಿಹ್ನೆ ಆನೆಯನ್ನು ಒಳಗೊಂಡ ಪ್ರತಿಮೆಗಳನ್ನೂ ನಿರ್ಮಿಸಿದ್ದರು.
ಅದನ್ನು ಪ್ರಶ್ನಿಸಿ ನ್ಯಾಯವಾದಿಯೊಬ್ಬರು 2009ರಲ್ಲಿ ಮೊಕದ್ದಮೆ ಹೂಡಿದ್ದರು. ಅದನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
‘ಸಾರ್ವಜನಿಕರ ಹಣದಿಂದ ಈ ಪ್ರತಿಮೆ, ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಅವರು ಅದನ್ನು ವಾಪಸ್ ಮಾಡಬೇಕು’ ಎಂದು ಹೇಳಿ, ಏ.2ರಂದು ಮುಂದಿನ ವಿಚಾರಣೆ ನಿಗದಿ ಮಾಡಿದೆ.
ತೇಜಸ್ವಿಗೆ ದಂಡ: ಮತ್ತೂಂದು ಪ್ರಕರಣದಲ್ಲಿ ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್‌ಗೆ ಸುಪ್ರೀಂಕೋರ್ಟ್ 50 ಸಾವಿರ ರೂ.ದಂಡ ವಿಧಿಸಿದ್ದಲ್ಲದೆ, ಅವರು ವಾಸ್ತವ್ಯ ಹೂಡಿರುವ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ. ಈ ಬಗ್ಗೆ ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.