Advertisement

ರಂಗಕಲೆ-ಸಾಹಿತ್ಯ ಕರುಳುಬಳ್ಳಿ  ಸಂಬಂಧ: ಚೌಗಲೆ 

04:59 PM Aug 04, 2018 | |

ಬೆಳಗಾವಿ: ಸಮಾಜ ಆರೋಗ್ಯವಾಗಿರಲು ಹಾಗೂ ಕಲಾ ಶ್ರೀಮಂತಿಕೆ ಪಡೆಯಬೇಕಾದರೆ ರಂಗ ಕಲೆ, ಸಾಹಿತ್ಯದೊಂದಿಗೆ ನಂಟು ಬೆಸೆದುಕೊಳ್ಳಬೇಕು. ಇದೊಂದು ಕರುಳು ಬಳ್ಳಿಯ ಸಂಬಂಧವಾಗಬೇಕು ಎಂದು ನಾಟಕಕಾರ ಡಾ| ಡಿ.ಎಸ್‌. ಚೌಗಲೆ ಅಭಿಪ್ರಾಯಪಟ್ಟರು.

Advertisement

ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಯುವ ರಂಗ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ನಡೆದ ರಂಗ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ, ಲಲಿತ ಕಲೆ, ರಂಗಭೂಮಿ, ಜಾನಪದ ಸಾಹಿತ್ಯಗಳು ಗಟ್ಟಿಯಾಗಿ ನೆಲೆಯೂರಲು ಉತ್ತಮ ಸಂಬಂಧ ಹೊಂದಬೇಕಾಗುತ್ತದೆ ಎಂದರು.

ಸಮಾಜದಲ್ಲಿ ಧಾರ್ಮಿಕ ಸೇರಿದಂತೆ ಇತರೆ ಕಾರ್ಯ ಚಟುವಟಿಕೆಗಳಿಗೆ ಜನ ದಾನ, ಸಹಾಯಧನ ನೀಡುತ್ತಾರೆ. ಆದರೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಗಳಿಗೆ ಸಹಾಯ ಮಾಡಲು ಹಿಂದೇಟು ಹಾಕುತ್ತಾರೆ. ಈ ಬೆಳವಣಿಗೆ ರಂಗಭೂಮಿ ಕ್ಷೀಣಿಸಲು ಪ್ರಮುಖ ಕಾರಣವಾಗಿದೆ. ಮರಾಠಿ ರಂಗಭೂಮಿಗೆ ಅಲ್ಲಿಯ ಸಮಾಜ ಆರ್ಥಿಕ ಸಹಾಯ ಮಾಡುವ ಮೂಲಕ ಬೆಳೆಸುತ್ತಿದೆ. ಇದು ಇಲ್ಲಿಯ ಪ್ರದೇಶಕ್ಕೆ ಮಾದರಿಯಾಗಬೇಕಿದೆ ಎಂದರು.

ರಂಗಭೂಮಿಗೆ ಸೇವೆ ಸಲ್ಲಿಸುತ್ತಿರುವ ಬಾಬಾಸಾಹೇಬ ಕಾಂಬಳೆ ಹಾಗೂ ರಾಜು ಮಠಪತಿ ಅಂಥ ಯುವ ರಂಗಕರ್ಮಿಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಈ ರಂಗ ಶಿಬಿರಕ್ಕೆ ಆಯ್ಕೆ ಮಾಡಿಕೊಂಡಿರುವ ಸತ್ಯಶೋಧಕ ನಾಟಕ ಮರಾಠಿಯಲ್ಲಿ ಪ್ರಸಿದ್ಧಿ ಪಡೆದಿದೆ. ಮರಾಠಿಯಲ್ಲಿ ಖ್ಯಾತ ನಿರ್ದೇಶಕ ಅತುಲ ಪೇಠೆ ನಿರ್ದೇಶಿಸಿದರೆ, ಕನ್ನಡದಲ್ಲಿ ಜನಮಾನಸ ತಂಡಕ್ಕೆ ಗಣೇಶ ಅವರು ನಿರ್ದೇಶನ ಮಾಡಿದ್ದಾರೆ. ಇಲ್ಲಿಯೂ ಯುವ ನಿರ್ದೇಶಕರು ಉತ್ತಮವಾಗಿ ನಾಟಕ ಕಟ್ಟಿಕೊಡಲಿ ಎಂದು ಹಾರೈಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಪ್ಪ ಅದರಗುಂಚಿ ಮಾತನಾಡಿ, ಸದ್ಯ ರಂಗಭೂಮಿ ಅನುದಾನಕ್ಕಾಗಿ ಆಟ ಎಂಬ ಸ್ಥಿತಿಗೆ ಬಂದು ತಲುಪಿದೆ. ಹಣ ನೀಡಿದಾಗ ಮಾತ್ರ ನಾಟಕಗಳು ಪ್ರದರ್ಶನವಾಗುತ್ತಿವೆಯೇ ಎಂಬ ಭಾವ ಮೂಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕಲೆ-ಸಂಸ್ಕೃತಿ ಬೆಳೆಯಬೇಕಾದರೆ ಸಹಾಯ-ಸಹಕಾರ ಅಗತ್ಯವಾಗಿದೆ ಎಂದರು. 

Advertisement

ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ರವಿ ಕೋಟಾರಗಸ್ತಿ ಹಾಗೂ ಬಾಬಾ ಸಾಹೇಬ ಕಾಂಬಳೆ ಮಾತನಾಡಿದರು. ನಾಟಕ ಅಕಾಡೆಮಿ ಸದಸ್ಯ ಬಸವರಾಜ ದೊಡಮನಿ, ಅಧ್ಯಕ್ಷತೆ ವಹಿಸಿದ್ದ ಅಶೋಕ ಮಳಗಲಿ, ರಂಗ ನಟ ಮಂಜುನಾಥ ನೀಲಣ್ಣವರ ಮಾತನಾಡಿದರು. ಯುವ ರಂಗ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ರಾಜು ಮಠಪತಿ, ಬಸವರಾಜ ತಳವಾರ ಇತರರು ಇದ್ದರು. 

ವಿದ್ಯಾರ್ಥಿಗಳಲ್ಲಿ ರಂಗಭೂಮಿ ಶಿಕ್ಷಕಣ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಶಾಲೆಗಳಿಗೆ ರಂಗ ಶಿಕ್ಷಕರನ್ನು ನೇಮಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಶಿಕ್ಷಣ ಸಚಿವ ಮಹೇಶ ಅವರ ಹೇಳಿಕೆ ಇಂದಿನ ದಿನಮಾನಕ್ಕೆ ಸ್ತುತ್ಯಾರ್ಹವಾಗಿದೆ. ಅಭಿನಂದಿಸುತ್ತೇನೆ.
 ಡಾ| ಡಿ.ಎಸ್‌. ಚೌಗಲೆ, ನಾಟಕಕಾರರು

Advertisement

Udayavani is now on Telegram. Click here to join our channel and stay updated with the latest news.

Next