Advertisement

ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ

07:26 PM Aug 26, 2020 | Suhan S |

ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರನ್ನು ದಾಖಲಿಸಿ ಯಾವುದೇ ಕುಂದು ಕೊರತೆಯಾಗದಂತೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸೂಚನೆ ನೀಡಿದರು.

Advertisement

ಅವರು ಮಂಗಳವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ನಗರದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿ ಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದರು. ಪ್ರಸ್ತುತ ಸುಬ್ಬಯ್ಯ ಮೆಡಿಕಲ್‌ ಕಾಲೇಜು, ನಾರಾಯಣ ಹೃದಯಾಲಯ, ಮ್ಯಾಕ್ಸ್‌ ಮತ್ತು ನಂಜಪ್ಪ ಆಸ್ಪತ್ರೆಗಳಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸುಮಾರು 600 ಬೆಡ್‌ ಗಳಿವೆ. ಇವುಗಳ ಪೈಕಿ ಶೇ.50ರಷ್ಟು ಬೆಡ್‌ಗಳನ್ನು ಸರ್ಕಾರಿ ಕೋಟಾದಡಿ ಒದಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ ಕೆಲವು ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ದೂರುಗಳು ಬರುತ್ತಿವೆ. ಇತ್ತೀಚಿಗೆ ಕೊರೋನಾ ಸೋಂಕಿತೆ ಗರ್ಭಿಣಿಯೊಬ್ಬರನ್ನು ದಾಖಲಿಸಲು ಖಾಸಗಿ ಆಸ್ಪತ್ರೆಯೊಂದು ನಿರಾಕರಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದೂರುಗಳು ಬರಬಾರದು ಎಂದು ಅವರು ಹೇಳಿದರು.

ತಂಡ ರಚನೆ: ಮೆಗ್ಗಾನ್‌ ಸೇರಿದಂತೆ ಎಲ್ಲಾ ಕೋವಿಡ್‌ ಆಸ್ಪತ್ರೆಗಳಿಗೆ ಪ್ರತಿದಿನ ಭೇಟಿ ನೀಡಿ, ರೋಗಿಗಳೊಂದಿಗೆ ಮಾತನಾಡಿ, ಲಭ್ಯವಿರುವ ಬೆಡ್‌ ಸಂಖ್ಯೆ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲು ಹಿರಿಯ ವೈದ್ಯಾಧಿ ಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗುವುದು. ಈ ತಂಡ ಪ್ರತಿದಿನ ವರದಿಯನ್ನು ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ಹೇಳಿದರು.

ಪ್ರಸ್ತುತ ಮೆಗ್ಗಾನ್‌ನಲ್ಲಿ 160 ಕೋವಿಡ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ 250 ಮಂದಿ ಕೊರೊನಾ ಶಂಕಿತರು ಐಸೋಲೇಶನ್‌ ವಾರ್ಡ್‌ನಲ್ಲಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸಹ ಇಂತಹ ಐಸೋಲೇಶನ್‌ ವಾರ್ಡ್‌ ಆರಂಭಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ಪ್ರಮಾಣ ಇಳಿಮುಖ: ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಕೋವಿಡ್ ಪಾಸಿಟಿವ್‌ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೆಗ್ಗಾನ್‌ ಆಸ್ಪತ್ರೆಗಿಂತ ಹೆಚ್ಚಾಗಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವವರಿಂದ ಹೆಚ್ಚಿನ ದೂರುಗಳು ಬರುತ್ತಿವೆ. ಕೋವಿಡ್ ಪೀಡಿತರಿಗೆ ಮಾನಸಿಕ ಧೈರ್ಯ ತುಂಬಲು ಮನಶಾಸ್ತ್ರಜ್ಞರು ಮತ್ತು ಕೌನ್ಸಿಲರ್‌ಗಳನ್ನು ನಿಯೋಜಿಸಬೇಕು. ಅವರು ಪ್ರತಿದಿನ ಕೊರೊನಾ ಪೀಡಿತರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕು ಎಂದು ಅವರು ಹೇಳಿದರು.

Advertisement

ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುವ ಕೋವಿಡ್ ತಪಾಸಣೆಯ ಫಲಿತಾಂಶವನ್ನು ಆದಷ್ಟು ಬೇಗನೆ ಸಂಬಂಧಪಟ್ಟವರಿಗೆ ತಿಳಿಸುವ ವ್ಯವಸ್ಥೆ ಮಾಡಬೇಕು ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next