Advertisement

ಭವಿಷ್ಯದ ಕನ್ನಡ ಕಟ್ಟಲು ತಾಂತ್ರಿಕ ಸ್ಪರ್ಷ ನೀಡಿ

04:51 PM Jul 18, 2022 | Team Udayavani |

ಬೆಳಗಾವಿ: ಭವಿಷ್ಯದ ಕನ್ನಡ ಕಟ್ಟಲು ತಂತ್ರಾಂಶಗಳಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸುವ ಕಾರ್ಯ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌. ನಾಗಾಭರಣ ತಿಳಿಸಿದರು.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ನಡೆದ ಕನ್ನಡ ನುಡಿ ನಡೆ, ಕಾಯಕ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಭವಿಷ್ಯದ ಕನ್ನಡ ಕಟ್ಟಬೇಕಾದರೆ ತಂತ್ರಾಂಶಗಳಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು. ಜೊತೆಗೆ ಎಲ್ಲರೂ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಸದಾ ಕನ್ನಡ ಭಾಷೆ ಬಳಸಿದರೆ ಭವಿಷ್ಯದಲ್ಲಿ ಕನ್ನಡ ವ್ಯಾಪಕವಾಗಿ ಬೆಳವಣಿಗೆಯಾಗುವುದರ ಮೂಲಕ ಪ್ರಾಬಲ್ಯ ಸಾಧಿಸಲಿದೆ ಎಂದು ತಿಳಿಸಿದರು.

ಮೊಬೈಲ್‌ನಲ್ಲಿ ಟೈಪ್‌ ಮಾಡುವ ಕೀಬೋರ್ಡ್ ನಿಂದ ಹಿಡಿದು ಫೇಸ್ಬುಕ್-ವಾಟ್ಸ್‌ ಆ್ಯಪ್‌, ನೋಟ್ಸ್‌ ಟೈಪ್‌, ಮೆಸೆಜ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ರಾರಾಜಿಸುತ್ತಿರುವ ಈ ಹೊತ್ತಿನಲ್ಲಿ ತಂತ್ರಜ್ಞಾನದಲ್ಲಿ ಕನ್ನಡ ಬಳಸಲು ಎಲ್ಲರೂ ಒತ್ತು ನೀಡಬೇಕು. ಇದರಿಂದ ಭವಿಷ್ಯದಲ್ಲಿ ಕನ್ನಡವನ್ನು ವ್ಯಾಪಕವಾಗಿ ಬೆಳೆಸಲು ಸಹಾಯವಾಗಲಿದೆ ಎಂದು ಹೇಳಿದರು.

ಕನ್ನಡದ ಉಳಿವಿಗಾಗಿ ಹೆಚ್ಚು ಕನ್ನಡ ಭಾಷೆಯನ್ನು ಬಳಸಬೇಕು. ದೈನಂದಿನ ಜೀವನದಲ್ಲಿ ಕನ್ನಡ ಮಾತಾಡಬೇಕು, ಬರೆಯಬೇಕು. ಮನೆಗಳಲ್ಲಿ ಮಕ್ಕಳ ಜತೆ ಕನ್ನಡದಲ್ಲಿಯೇ ಮಾತನಾಡುವುದರಿಂದ, ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಕೆ ಮಾಡುವುದರಿಂದ ನಮ್ಮ ಭಾಷೆ ಜೀವಂತವಾಗಿರುತ್ತದೆ. ಬಳಸಿದ ಹಾಗೆಯೇ ಭಾಷೆ ಬೆಳೆಯುತ್ತದೆ ಎಂದು ತಿಳಿಸಿದರು.

ಈ ಹಿಂದಿನಿಂದ ಕನ್ನಡ ಉಳಿವಿಗೆ ಅನೇಕ ಹೋರಾಟಗಳು ನಡೆದಿವೆ. ವರ್ತಮಾನದಲ್ಲಿ ಹಾಗೂ ಭವಿಷ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಪ್ರಾಧಿಕಾರ, ಸಂಘಟನೆಗಳಿಗೆ ಮಾತ್ರ ಬಿಡದೆ ನಮ್ಮ ನಿತ್ಯ ಜೀವನದಲ್ಲಿ ಕನ್ನಡ ಬಳಕೆ ಮಾಡುವ ಮೂಲಕ ಸಮುದಾಯದ ಪ್ರತಿಯೊಬ್ಬರೂ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು. ಕನ್ನಡ ಭಾಷೆಯ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ಅನಿವಾರ್ಯತೆ ಈ ದಿನಗಳಲ್ಲಿದೆ. ಮೊಬೈಲ್‌ ಬಳಕೆ ಸರ್ವವ್ಯಾಪಿ ಆಗುತ್ತಿರುವುದರಿಂದ ಮೊಬೈಲ್‌ನಲ್ಲಿಯೇ ಕನ್ನಡ ಲಿಪಿಯ ಪರಿಣಾಮಕಾರಿ ಬಳಕೆಗೆ ನಾವೆಲ್ಲರೂ ಒತ್ತು ನೀಡಬೇಕು. ಆಧುನಿಕ ತಂತ್ರಜ್ಞಾನ ಮೂಲಕ ಕನ್ನಡವನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

Advertisement

ಕನ್ನಡ ಭಾಷೆಯನ್ನು ಸದಾ ಕಾಲ ಬಳಕೆಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಯುವಕರು ಕನ್ನಡ ಭಾಷೆ ಬಳಕೆ ಮಾಡುವುದರ ಮೂಲಕ ಕನ್ನಡದ ಬೆಳವಣಿಗೆಗೆ ಶ್ರಮಿಸಬೇಕು. ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರೂ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕು ಎಂದು ನಾಗಾಭರಣ ಹೇಳಿದರು.

ಕನ್ನಡ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಶಾಲಾ-ಕಾಲೇಜು ಮುಖ್ಯಸ್ಥರಿಗೆ ಪ್ರಶಸ್ತಿ ಪತ್ರಗಳನ್ನು ಹ್ತಾಂತರಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂತೋಷ ಹಾನಗಲ್‌, ಲೇಖಕರು ಹಾಗೂ ರಂಗಕರ್ಮಿ, ನಿರ್ದೇಶಕ ರಿಪತಿ ಮಂಜನಬೈಲು, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಜಿ ಧಾರವಾಡ ಇದ್ದರು.

ಡಾ. ಅರವಿಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಹಾಗೂ ವಿನಾಯಕ ಮೊರೆ ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು. ಜ್ಯೋತಿ ಬಾದಾಮಿ ಸ್ವಾಗತಿಸಿದರು. ನಿರ್ಮಲ ಬಟ್ಟಲ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next