ಮುಳಬಾಗಿಲು: ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ವಿದ್ಯುತ್ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡ ಕಾರ್ಮಿಕರ ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕು, ತಪ್ಪಿತಸ್ಥ ಅಧಿಕಾರಿಗಳ ವಜಾ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಹಾಯಕ ಎಂಜಿನಿಯರ್ ಪ್ರಭಾಕರ್‌ರೆಡ್ಡಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯುತ್ ಅವಘಡಗಳು ಹೆಚ್ಚುತ್ತಿವೆ. ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ಮೌನ: ತನ್ನ ಕುಟುಂಬದ ನಿರ್ವಹಣೆಗಾಗಿ ಕೂಲಿಗೆ ಬರುವ ಕಾರ್ಮಿಕರಿಗೆ ಟೆಂಡರ್‌ದಾರರು ಯಾವುದೇ ರಕ್ಷಕ ಕವಚಗಳನ್ನು ಕೊಡದೇ ಕಾಲ ಕಸದಂತೆ ಕಾಣುತ್ತಿದ್ದಾರೆ. ಕಾರ್ಮಿಕರು ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಕೆಲಸ ಮಾಡುವಂತಾಗಿದೆ. ಆದರೂ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳು ಮೌನವಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ರಕ್ಷಣೆ ಇಲ್ಲ: ವಿರೂಪಾಕ್ಷಿ ಗ್ರಾಮದ ಬಳಿ ಕೆಲವು ತಿಂಗಳುಗಳಿಂದ ನಿರಂತರ ಜ್ಯೋತಿ ಯೋಜನೆಯಡಿ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಆಂಧ್ರದ ಖಾಸಗಿ ಕಂಪನಿಯೊಂದು ಟೆಂಡರ್ ಪಡೆದಿದೆ. ನೂರಾರು ಕಾರ್ಮಿಕರು ಕೆಲಸ ಮಾಡಿಸುತ್ತಿದ್ದರು. ಅವರಿಗೆ ಯಾವುದೇ ರಕ್ಷಕಗಳನ್ನು ನೀಡದೇ ಕೆಲಸ ಮಾಡಲಾಗುತ್ತಿತ್ತು. ಇದರಿಂದ ವಿದ್ಯುತ್ ಅವಘಡದಿಂದ ರಾಜಬಾಬು ಮತ್ತು ಚಿನ್ನಿಬಾಲು ಬಲಿಯಾಗಿದ್ದಾರೆ ಎಂದು ಆರೋಪಿಸಿದರು.
ನಕಲಿ ಬಿಲ್: ತಾಲೂಕು ಅಧ್ಯಕ್ಷ ಫಾರುಕ್‌ಪಾಷ ಮಾತನಾಡಿ, ಜನರ ತೆರಿಗೆ ಹಣ ರಾಜಾರೋಷವಾಗಿ ಪೋಲು ಮಾಡುವ ಬೆಸ್ಕಾಂ ಅಧಿಕಾರಿಗಳು ರೈತರಿಗೆ ಟಿ.ಸಿ ನೀಡಲು 20 ಸಾವಿರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಇನ್ನೂ ಮಳೆ ಗಾಳಿ ಹೆಸರಿನಲ್ಲಿ ಕಂಬಗಳು ಮತ್ತು ಲೈನ್‌ಗಳನ್ನು ಸರಿಪಡಿಸುವ ನೆಪದಲ್ಲಿ ನಕಲಿ ಬಿಲ್ಗಳನ್ನು ಸೃಷ್ಟಿ ಮಾಡಿ ಲಕ್ಷಾಂತರ ರೂ. ನುಂಗಿ ನೀರು ಕುಡಿಯುತ್ತಿದ್ದಾರೆಂದರು.
ಕೆಲಸದಿಂದ ವಜಾ ಮಾಡಿ: ಕೂಲಿ ಕಾರ್ಮಿಕರಿಗೆ ಯಾವುದೇ ಮೂಲ ಸೌಕರ್ಯ ನೀಡದೇ, ಅಮಾಯರಕನ್ನು ತಮ್ಮ ಕೆಲಸಗಳಿಗೆ ಉಪಯೋಗಿಸಿಕೊಂಡು ಅವರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿರುವ ಟೆಂಡರ್‌ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶ್ರೀಮಂತರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಮನವಿ ಸಲ್ಲಿಸಿ ದರು. ಸಾಗರ್, ರಂಜಿತ್, ಜುಬೇರ್ ಪಾಷ, ಸುಪ್ರಿಂಚಲ, ಶಿವು, ಯಲುವಳ್ಳಿ ಪ್ರಭಾಕರ್, ಮೇಲಾಗಣಿ ದೇವರಾಜ್, ಪುತ್ತೇರಿ ರಾಜು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.