Advertisement

ಭ್ರಷ್ಟಾಚಾರದ ದಾಖಲೆ ನೀಡಿ ಪ್ರತಿಭಟನೆ ನಡೆಸಿ: ಐವನ್‌

03:45 AM Feb 20, 2017 | Team Udayavani |

ಮಂಗಳೂರು: ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ ದಾಖಲೆ ಬಿಡುಗಡೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿ. ಅದನ್ನು ಬಿಟ್ಟು ವಿನಾ ಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು.

Advertisement

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು ಕನಸಿನಲ್ಲೂ ಭ್ರಷ್ಟಾಚಾರದ ಬಗ್ಗೆಯೇ ಚಿಂತಿಸುತ್ತಿದ್ದಾರೆ. ಹೀಗಾಗಿ ಎಲ್ಲರ ಮೇಲೂ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಅವರು ಮೊದಲು ಆ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಲಿ. ಎಂಎಲ್‌ಸಿ ಗೋವಿಂದರಾಜು ಅವರ ಡೈರಿಯಲ್ಲಿ ಸ್ಟೀಲ್‌ ಬ್ರಿಜ್‌ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದಾಖಲೆ ಇದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ ಯಡಿಯೂರಪ್ಪ ಹಾಗೂ ಅನಂತಕುಮಾರ್‌ ಅವರ ಸಂಭಾಷಣೆ ಇರುವ ಸಿಡಿಯ ಕುರಿತು ತನಿಖೆಯೇ ನಡೆದಿಲ್ಲ. ಈ ಕುರಿತು ನಾನು ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್‌ ಠಾಣೆಗೆ ದೂರು ನೀಡಿದರೂ, ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. ಹೀಗಾಗಿ ಮೊದಲು ಅದನ್ನು ತನಿಖೆ ಮಾಡಬೇಕು ಎಂದರು.

ಕೀಳುಮಟ್ಟದ ರಾಜಕೀಯ 
ಸಚಿವ ರಮೇಶ್‌ ಜಾರಕಿಹೊಳಿ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ ಎನ್ನುವ ಕಾರಣಕ್ಕೆ ಅವರನ್ನು ಅಪರಾಧಿ ಎಂದು ನಿರ್ಧರಿಸುವುದು ತಪ್ಪು. ಹಾಗೆಯೇ ಕಾಂಗ್ರೆಸ್‌ ನಾಯಕರಾದ ಲಕ್ಷ್ಮೀ ನಿಂಬಾಳ್ಕರ್‌, ಎಂ.ಎಲ್‌. ನಾಗರಾಜ್‌ ಮನೆಗೂ ಐಟಿ ದಾಳಿ ನಡೆದಿದ್ದು, ಅವರನ್ನೂ ಬಿಜೆಪಿ ಅಪರಾಧಿ ಎಂದು ಬಿಂಬಿಸುತ್ತಿದೆ. ಇಂತಹ ಕೀಳುಮಟ್ಟದ ರಾಜಕೀಯ ಬಿಜೆಪಿಗೆ ಶೋಭೆಯಲ್ಲ ಎಂದರು.

ಧರ್ಮಸ್ಥಳದಲ್ಲಿ  ಪ್ರಮಾಣ
ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದಾಗ ನನ್ನ ಮನೆಗೆ ಬಂದಿದ್ದರು. ಆದರೆ ಕುದ್ರೋಳಿ ದೇವಸ್ಥಾನಕ್ಕೆ ಹೋಗಲು ನಾನು ಬಿಡಲಿಲ್ಲ ಎನ್ನುವ ಮಾತು ಹಾಸ್ಯಾಸ್ಪದ. ನಾನು ಸಿಎಂಗೆ ಹೋಗಬೇಡಿ ಎಂದು ಹೇಳಿಲ್ಲ. ವಿಮಾನ ನಿಲ್ದಾಣದಲ್ಲಿ ಕುದ್ರೋಳಿಗೆ ಹೋಗುವ ಕುರಿತು ಸಚಿವರು ತಿಳಿಸಿದಾಗ ಆಮಂತ್ರಣವಿಲ್ಲದೆ ನಾನು ಹೇಗೆ ಹೋಗಲಿ ಎಂದು ಮುಖ್ಯಮಂತ್ರಿಗಳೇ ಹೇಳಿದ್ದರು. ನಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯವರಲ್ಲಿ ಈ ವಿಚಾರ ಮಾತನಾಡಲಿಲ್ಲ. ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿ ಅಣೆ ಮಾಡಲೂ ಸಿದ್ಧನಿದ್ದೇನೆ. ಬುಧವಾರ ಧರ್ಮಸ್ಥಳಕ್ಕೆ ಹೋಗುತ್ತಿದ್ದು, ಈ ವಿಚಾರದಲ್ಲಿ ಏನೂ ಮಾಡಿಲ್ಲ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಐವನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next