ಮಾಗಡಿ: ಶ್ರೀರಂಗ ಏತ ನೀರವಾರಿ ಯೋಜನೆಗೆ ಸಂಬಂಧಿಸಿದಂತೆ ರೈತರ ಭೂ ಸ್ವಾಧೀನ ಕುರಿತು ಹತ್ತು ದಿನಗಳೊಳಗೆ 1 ರಿಂದ 5 ದಾಖಲೆ ಪೂರ್ಣಗೊಳಿಸಿ ಪಟ್ಟಿ ನೀಡಬೇಕು ಎಂದು ಶಾಸಕ ಎ. ಮಂಜುನಾಥ್ ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಶ್ರೀರಂಗ ಏತ ನೀರವಾರಿ ಯೋಜನೆ ಪ್ರಗತಿ ಕುರಿತು ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಏತ ನೀರಾವರಿ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಲಿಖೀತವಾಗಿ ಬರೆದುಕೊಟ್ಟರೆ,
ಯೋಜನೆ ಸ್ಥಗಿತಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಇಂತಹ ಅಧಿಕಾರಿಗಳಿಂದ ನೀರು ತರಲಿಕ್ಕೆ ಆಗುವುದಿಲ್ಲ ಎಂದು ರೈತರಿಗೆ ಕೈ ಮುಗಿಯುತ್ತೇನೆ ಎಂದು ಶಾಸಕರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಕಂದಾಯ ಅಧಿಕಾರಿಗಳು ಮಾತನಾಡಿ, ಬಹುತೇಕ ರೈತರು ಅಗತ್ಯ ದಾಖಲೆಗಳನ್ನು ಒದಗಿಸುತ್ತಿಲ್ಲ. ಕೆಲವೊಂದು ಜಂಟಿ ಖಾತೆಯಿದ್ದು, ರೈತರಲ್ಲೇ ಹೊಂದಾಣಿಕೆಯಿಲ್ಲ. ನೋಟಿಸ್ ಜಾರಿ ಮಾಡಿದರೂ ವಂಶವೃಕ್ಷ, ಪಾವತಿಯಾಗಿರುವ ಬಗ್ಗೆ ಮಾಹಿತಿಯೇ ನೀಡುತ್ತಿಲ್ಲ. ಜೊತೆಗೆ ಸಮರ್ಪಕವಾಗಿಯೂ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ತಮ್ಮ ಅಸಾಯಕತೆಯನ್ನು ತೋಡಿಕೊಂಡರು. ಈ ಸಂಬಂಧ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಅಂತಹವರನ್ನು ಕರೆಸಿ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು. ಒಪ್ಪದಿದ್ದರೆ ನೀವು ಕಾನೂನು ಬದ್ಧವಾಗಿ ದಾಖಲೆ ಮಾಡಿ, ಕೋರ್ಟ್‌ಗೆ ಠೇವಣಿ ಕಟ್ಟಿ ಭೂಸ್ವಾಧೀನಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸಲಹೆ ನೀಡಿದರು.
ಹತ್ತು ದಿನದೊಳಗಾಗಿ ಯೋಜನೆಗೆ ಸಂಬಂಧಿಸಿದಂತೆ 9 ಹಳ್ಳಿಗಳಾದ ಬ್ಯಾಲಕೆರೆ, ಸರ್ವೇ ನಂಬರ್ 6, ಕೆಂಪೋಹಳ್ಳಿ ಸರ್ವೇ ನಂಬರ್ 26, ವಾಜರಹಳ್ಳಿ ಸರ್ವೇ ನಂಬರ್ 24, ಕನ್ನಸಂದ್ರ ಸರ್ವೇ ನಂಬರ್ 14 ಸೂರಪ್ಪನಹಳ್ಳಿ, ದಮನಕಟ್ಟೆ, ಮಣಿಗನ ಹಳ್ಳಿಗಳ ಸರ್ವೆ ನಂಬರಗಳ ಕುರಿತಂತೆ ರೈತರ ಭೂ ಸ್ವಾಧೀನ ಕುರಿತಂತೆ 1 ರಿಂದ 5
ದಾಖಲೆ ಸರಿಪಡಿಸಿ ಪಟ್ಟಿ ನೀಡಬೇಕು. ಅನ್‌ಲೈನ್ ಎಂದು ಕಾಯಬೇಡಿ, ವಿಶೇಷ ಕಾರ್ಯಕ್ರಮ ಎಂದು ಪರಿಗಣಿಸಿ ಆದಷ್ಟು ಬೇಗ ಕೆಲಸ ಮಾಡಬೇಕು. ದೊಡ್ಡಮುದಿಗೆರೆ ಸರ್ವೇ ನಂಬರ್ 119 ಮತ್ತು ಸರ್ವೇ ನಂಬರ್ 100 ರ ಬಹುತೇಕ ಕಡೆ ಪೈಪ್‌ಲೈನ್ ಆಗಿದೆ. ಉಳಿಕೆ ಗೋಮಾಳ ಭೂಮಿ ಭಾಗದಲ್ಲಿ ಬಾಕಿಯಿದ್ದು, ಇಲ್ಲಿ ರಾಮಣ್ಣ ಎಂಬುವರು ಅಡ್ಡಿಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. 22 ಕಿ.ಮೀ. ಪೈಕಿ 13 ಕಿ.ಮೀ. ಪೈಪ್‌ಲೈನ್ ಕೆಲಸ ಆಗಿದೆ. 11 ಎಕರೆಗೆ ಈಗಾಗಲೇ ಹಣ ಪಾವತಿಸಿದೆ. 14 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಭೂಸ್ವಾಧೀನ ಅಧಿಕಾರಿ ಚಂದ್ರಯ್ಯ ಶಾಸಕರ ಗಮನಕ್ಕೆ ತಂದರು.
ನಾರಸಂದ್ರದ ಮೂರು ಸರ್ವೇ ನಂಬರ್‌ನಲ್ಲಿ ದಾಖಲೆಗಳು ಅದಲುಬದಲಾಗಿದೆ. ಖಾತೆಗಳು ಹೊಂದಾಣಿಯಾಗುತ್ತಿಲ್ಲ, ಮಹೇಶ್, ರೇವಣ್ಣಸಿದ್ದಪ್ಪ, ಸಚ್ಚಿದಾನಂದಮೂರ್ತಿ ದಾಖಲೆ ತಿದ್ದುಪಡಿಗೂ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಈ ಸಂಬಂಧ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಜಿಪಂ ಸದಸ್ಯೆ ಚಂದ್ರಮ್ಮ ನಂಜಯ್ಯ ಮಾತನಾಡಿ, ಅಧಿಕಾರಿಗಳು ಜಿಪಂ ಸದಸ್ಯರಿಗೆ ಮಾಹಿತಿ ನೀಡುತ್ತಿಲ್ಲ. ಅನುದಾನದ ಬಂದಿರುವ ಬಗ್ಗೆಯೂ ಮಾಹಿತಿ ನೀಡದೆ, ಕೇವಲ ಕಾಮಗಾರಿ ಚಾಲನೆಗಷ್ಟೆ ಕರೆಯುತ್ತಾರೆ. ಹೀಗೆ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯಸುತ್ತಿದ್ದಾರೆ ಎಂದು ಆರೋಪಿಸಿದರು. ತಹಶೀಲ್ದಾರ್ ಎನ್.ರಮೇಶ್, ಎಸ್‌ಎಲ್‌ಎಒ ಚಂದ್ರಯ್ಯ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ್.ನಟರಾಜ್, ಸರ್ವೇ ಎಡಿಎಲ್‌ಆರ್ ನಂಜುಂಡಪ್ಪ, ಸೂಪರ್‌ವೈಸರ್ ತಿಮ್ಮಯ್ಯ, ಎಂಜಿನಿಯರ್, ಗಿರೀಶ್, ರೆವಿನ್ಯೂ ಅಧಿಕಾರಿಗಳಾದ ಶಿವರುದ್ರಯ್ಯ, ರಮೇಶ್, ವೆಂಕಟರಂಗಯ್ಯ, ರಹಮತ್, ವೆಂಕಟೇಶ್ ದಿವ್ಯಾ ಇತರರು ಇದ್ದರು.