ಬೆಂಗಳೂರು: ವಿದ್ಯಾರ್ಥಿದಿಸೆಯಲ್ಲೇ ಶಿಸ್ತನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಜಯನಗರದ ಕಮ್ಯೂನಿಟಿ ಕಾಲೇಜು ಶುಕ್ರವಾರ ಹಮ್ಮಿಕೊಂಡಿದ್ದ 12ನೇ ಬ್ಯಾಚ್‌ನ ಎಂಬಿಎ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ತಾಂತ್ರಿಕ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದು
ಅವುಗಳನ್ನು ಬಳಕೆ ಮಾಡಿಕೊಂಡು ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡುವಂತೆ ತಿಳಿಸಿದರು.
ನಾವು ಓದುತ್ತಿದ್ದ ಸಮಯದಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಇರಲಿಲ್ಲ. 20ರಿಂದ 25 ಕಿಲೋಮೀಟರ್ ದೂರ ನಡೆಯಬೇ ಕಾಗಿತ್ತು. ಆದರೆ ಈಗ ಆ ಪರಿಸ್ಥಿತಿಯಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆವಿಷ್ಕಾರಗಳು ನಡೆದಿವೆ. ಅಂಗೈಯಲ್ಲೇ ಹಲವು ಸವಲತ್ತುಗಳು ಸಿಗುತ್ತಿದ್ದು, ಅವುಗಳನ್ನು ಸದ್ಭಳಕೆ ಮಾಡಿಕೊಂಡು ಭಾರತವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ ಮನವಿ ಮಾಡಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವೋಡೆ ಪಿ.ಕೃಷ್ಣ ಮಾತನಾಡಿ ಕಲಿಕೆಯ ಹಂತದಲ್ಲೇ ಗುರಿಯನ್ನಿಟ್ಟು ಕೊಂಡು ಸಾಗಿದಾಗ ಮಾತ್ರ ಅದರಲ್ಲಿ ಯಶಸ್ಸು ಕಾಣಲು ಸಾಧ್ಯ.ಈ ಹಿನ್ನೆಲೆಯಲ್ಲಿ ಕಲಿಯುವ
ಹಂತದಲ್ಲಿರುವಾಗಲೇ ಕನಸು ಕಾಣುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಇದೇ ವೇಳೆ 2016-18ನೇ ಸಾಲಿನಲ್ಲಿ ಎಂಬಿಎಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಮ್ಯೂನಿಟಿ ಗ್ರೂಪ್ ಆಫ್ ಇನ್ಸಿಟ್ಯೂಟ್‌ನ ಕಾರ್ಯದರ್ಶಿ ಚಿಕ್ಕಯ್ಯ, ನಿರ್ದೇಶಕ ಡಾ.ಮಹೇಶ್ ಕುಮಾರ್, ಪ್ರೊ.ಬಿ.ಎಸ್. ಸುರೇಶ್ ಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.