ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಬಜೆಟ್‌ನಲ್ಲಿ 30 ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಎಂದು ಮುಳುಗಡೆ ಸಂತ್ರಸ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನವನಗರದ ಜಿಲ್ಲಾಡಳಿತ ಕಚೇರಿ ಎದುರು ಕೃಷ್ಣಾ ಮೇಲ್ದಂಡೆ ಯೋಜನಾ ಬಾಧಿತ ಸಂತ್ರಸ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಕಚೇರಿಯ ಎಸ್.ಎಸ್. ನಾಯ್ಕಲಮಠ ಅವರ ಮೂಲಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದರು.
ಸಂತ್ರಸ್ತ ಮುಖಂಡ ಪ್ರಕಾಶ ಅಂತರಗೊಂಡ ಮಾತನಾಡಿ, 524.26 ಮೀಟರ್ ಎತ್ತರಿಸಿದಾಗ 22 ಹಳ್ಳಿಗಳು ಮುಳುಗಡೆಯಾಗುತ್ತಿವೆ. ಈ ಗ್ರಾಮಗಳಿಗೆ ತಡೆಗೋಡೆ ನಿರ್ಮಿಸುವ ಯೋಜನೆ ಬಿಟ್ಟು ಇಂತಹ ಗ್ರಾಮಗಳನ್ನು ಸ್ಥಳಾಂತರಕ್ಕೆ ಮುಂದಾಗಬೇಕು. ಪುನರ್‌ವಸತಿ ಕೇಂದ್ರ ಮೂಲಭೂತ ಸೌಕರ್ಯ ಮತ್ತು ನವನಗರ ನಿರ್ಮಣಕ್ಕೆ ಭೂಮಿ ಕಳೆದುಕೊಂಡವರನ್ನು ಸಹ ಸಂತ್ರಸ್ತರೆಂದು ಪರಿಗಣಿಸಿ ಆಯಾ ಪುನರ್‌ವಸತಿ ಕೇಂದ್ರಗಳಲ್ಲಿ ಹಿನ್ನೀರಿನ ಸಂತ್ರಸ್ತತರಿಗೆ ನೀಡಿದಂತೆ ನಿವೇಶನ ಮತ್ತು ವಾಣಿಜ್ಯ ನಿವೇಶನಗಳನ್ನು ನೋಡಬೇಕು. ಬಿನ್ ಶೇತ್ಕಿ ಜಮೀನನ್ನು ಯೋಜನೆಗಾಗಿ ಕಳೆದುಕೊಂಡು ಇಚ್ಚೆ ಪಟ್ಟಲ್ಲಿ ಪರಿಹಾರ ಬದಲಾಗಿ ಪರಿಹಾರ ಹಿಂಪಡೆದು, ಪುನರ್‌ವಸತಿ ಕೇಂದ್ರಗಳಲ್ಲಿ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು.
ಯೋಜನಾ ಬಾಧಿತ ಕುಟುಂಬದವರಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣಕ್ಕೆ ತಗಲುವ ಶಿಕ್ಷಣ ಶುಲ್ಕ, ಊಟ, ವಸತಿ ನಿಲಯ ಶುಲ್ಕ ನೀಡಿ ಶಿಕ್ಷಣ ಭಾಗ್ಯ ಒದಗಿಸಬೇಕು. ಈಗಾಗಲೇ ಒಂದನೇ ಮತ್ತು ಎರಡನೇ ಹಂತದಲ್ಲಿ ಭೂಮಿ ಕಳೆದುಕೊಂಡವರಲ್ಲಿ ಶೇ. 80 ಜನ ಬೀದಿಪಾಲಾಗಿದ್ದಾರೆ. ಎಲ್ಲ ಪದವಿ ಶಿಕ್ಷಣ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣದಲ್ಲಿ ಸಂತ್ರಸ್ತರ ಮಕ್ಕಳಿಗೆ ಹೆಚ್ಚುವರಿ ಪ್ರವೇಶ ಅವಕಾಶ ನೀಡುವ ಮೂಲಕ ಮೀಸಲಾತಿ ಒದಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
2015ರಲ್ಲಿ ಎಸ್.ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾರುಕಟ್ಟೆ ಬೆಲೆ ನಿರ್ಧರಣಾ ಸಮಿತಿ ರಚಿಸಿ ಸಂತ್ರಸ್ತರಿಗೆ ಯೋಗ್ಯ ಪರಿಹರ ನೀಡಬೇಕು. ಕಾನೂನಿನ ಪ್ರಕಾರ ಬೆಲೆ ನಿರ್ಧರಿಸಿದರೆ ಅವೈಜ್ಞಾನಿಕ ಮಾರ್ಗಸೂಚಿ ಬೆಲೆಗಳನ್ವಯ ನೊಂದಣಿಯಾದ ಬೆಲೆಗಳಿಂದ ಸಂತ್ರಸ್ತರಿಗೆ ಸರಿಯಾದ ಬೆಲೆ ಸಿಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದರು. ಆದರೆ, ಈಗ ಕಾನೂನಿನ ಪ್ರಕಾರ ಸಂತ್ರಸ್ತರು ಕಳೆದುಕೊಂಡ ಭೂಮಿಗಳಿಗೆ ಹಾಗೂ ಆಸ್ತಿಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳುತ್ತಿದ್ದಾರೆ. ಕಾನೂನಿನ ರೀತಿಯಲ್ಲಿ ಪರಿಹಾರ ನೀಡಿದರೆ ರೈತರು ಮರಳಿ ಭೂಮಿಯನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಮಾರುಕಟ್ಟೆ ಬೆಲೆ ನಿರ್ಧಾರ ಸಮಿತಿ ರಚಿಸಿ ಸಂತ್ರಸ್ತರಿಗೆ ಯೋಗ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಲ್ಲಿಕಾರ್ಜುನ ಅಂಗಡಿ, ಕಿರಣ ಬಾಳಗೋಳ, ಸಿದ್ದು ಗಿರಗಾಂವಿ, ಬಸವರಾಜ ಮಲಕಗೊಂಡ, ಈಶ್ವರ ಕೋನಪ್ಪನವರ, ಹನಮಂತಗೌಡ ಪಾಟೀಲ, ರಾಜು ಕಾಖಂಡಕಿ ಉಪಸ್ಥಿತರಿದ್ದರು.