Advertisement
ಮಾ. 25ರಂದು ಘಾಟ್‌ಕೋಪರ್ ಪಶ್ಚಿಮದ ಅಸಲ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ರಂಗಮಂಟಪದಲ್ಲಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಚೆಂಡೆವಾದಕ ಕೃಷ್ಣಪ್ಪ ಕೆ. ದೇವಾಡಿಗ ಮತ್ತು ಕುಟುಂಬಸ್ಥರ ಸೇವಾರ್ಥದಲ್ಲಿ ಕೋಟಿ-ಚೆನ್ನಯ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚೆಂಡೆವಾದಕ ಕೆ. ಕೆ. ದೇವಾಡಿಗರ ದೇಹಕ್ಕೆ ಪ್ರಾಯವಾಗಿರಬಹುದು. ಆದರೆ ಅವರಲ್ಲಿ ಅಡಗಿರುವ ಕಲಾ ಮನಸ್ಸಿಗೆ ಪ್ರಾಯವಾಗಿಲ್ಲ. ಅವರಿಂದ ಮತ್ತಷ್ಟು ಕಲಾಸೇವೆ ಮಾಡುವ ಸೌಭಾಗ್ಯವನ್ನು ಕಲಾಮಾತೆ ಕರುಣಿಸಲಿ ಎಂದು ಹಾರೈಸಿದರು.
Related Articles
Advertisement
ಯಕ್ಷಗಾನ ತಾಳಮದ್ದಳೆಯ ಹಿರಿಯ ಅರ್ಥದಾರಿ ಕೆ. ಕೆ. ಶೆಟ್ಟಿ ಅವರು ಮಾತನಾಡಿ, ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯನ್ನು ಅಭಿನಂದಿಸುತ್ತೇನೆ. ಈ ಮಂಡಳಿಯ ಉದ್ಧಾರಕ್ಕಾಗಿ ದುಡಿದ ಎಲ್ಲರನ್ನೂ ಸ್ಮರಿಸಿ ವಂದಿಸುತ್ತೇನೆ. ಯಾವುದೇ ಸಂಘ-ಸಂಸ್ಥೆ ಬೆಳೆದಂತೆ ಅದು ಗಟ್ಟಿಯಾಗುತ್ತದೆ. ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯು ಭವಿಷ್ಯದಲ್ಲಿ ಶತಮಾನೋತ್ಸವವನ್ನು ಕಾಣುವಂತಾಗಲಿ ಎಂದು ಹಾರೈಸಿದರು.
ಬಂಟರವಾಣಿಯ ಪ್ರಧಾನ ಸಂಪಾದಕ ರಂಗನಟ ಅಶೋಕ್ ಶೆಟ್ಟಿ ಪಕ್ಕಳ ಅವರು ಮಾತನಾಡಿ, ಮಹಾನಗರದ ಯಾಂತ್ರಿಕ ಬದುಕಿನ ನಡುವೆಯೂ ಯಕ್ಷಗಾನ ಮಂಡಳಿಯನ್ನು ಕಟ್ಟಿ ಕಲಾ ಸೇವೆಯೊಂದಿಗೆ 50 ವರ್ಷಗಳಷ್ಟು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯು ಪೂರೈಸಿರುವುದು ಅಭಿನಂದನೀಯ. ಕಲಾಮಾತೆಯ ಸೇವೆಯನ್ನು ನೀಡುವ ಭಾಗ್ಯ ನಮಗೆಲ್ಲ ಒದಗಿ ಬಂದಿರುವುದು ಹೆಮ್ಮೆ ಎನಿಸುತ್ತಿದೆ ಎಂದರು.
ಘಾಟ್‌ಕೋಪರ್ ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಾಬಾಳಿಕೆ ಅವರು ಮಾತನಾಡಿ, ಶ್ರೀ ಗೀತಾಂಬಿಕಾ ಮಂಡಳಿಗೂ ಕನ್ನಡ ವೆಲ್ಫೆರ್ ಅಸೋಸಿಯೇಶನ್‌ಗೂ ನಿಕಟವಾದ ಸಂಬಂಧವಿದೆ. ಇವೆರಡೂ ಸಂಸ್ಥೆಗಳು ಒಟ್ಟೊಟ್ಟಿಗೆ ಸ್ಥಾಪನೆಗೊಂಡು ಸುವರ್ಣ ಮಹೋತ್ಸವ ಸಂಭ್ರಮದಲ್ಲಿವೆ. ನಿಮ್ಮೆಲ್ಲರನ್ನೂ ಜತೆ ಸೇರಿಸಿಕೊಂಡು ಅಸೋಸಿಯೇಶನ್ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ನುಡಿದರು.
ಪೊವಾಯಿ ಕನ್ನಡ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಐದು ದಶಕಗಳ ಕಲಾಸೇವೆಯನ್ನು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯು ಮಾಡಿರುವುದು ದೊಡ್ಡ ಸಾಧನೆಯಾಗಿದೆ. ಕೆ. ಕೆ. ದೇವಾಡಿಗ ಅವರ ಕಲಾ ಸೇವೆಯನ್ನು ಗುರುತಿಸಿ ಸಮ್ಮಾನಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಅತಿಥಿಗಳನ್ನು ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಗೌರವಿಸಿದರು. ಶ್ರೀ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಕಣಂಜಾರು ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಮಂಡಳಿಯ ಸುನಿಲ್ ಅಮೀನ್, ಶ್ರೀ ಗೀತಾಂಬಿಕಾ ದೇವಸ್ಥಾನದ ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.