ಸಮಯ: ಬೆಳಗ್ಗೆ 8- ರಾತ್ರಿ 8
ವಾರದ ಎಲ್ಲಾ ದಿನ ತೆರೆದಿರುತ್ತದೆ
Advertisement
ಮಂಡಕ್ಕಿಯನ್ನು ಹಾಗೇ ತಿನ್ನಲೂ ತುಂಬಾ ರುಚಿ. ಅದರಲ್ಲೂ ರಾಣೆಬೆನ್ನೂರಿನಿಂದ ತರಿಸಿದ ಮಂಡಕ್ಕಿಗೆ ಹದವಾಗಿ ಖಾರ, ಸೇವು ಹಾಕಿ ಸಾಂಬಾರ ಮಿಕ್ಸ್ ಮಾಡಿ, ಅದರ ಮೇಲೊಂದು ಕರಿದ ಮೆಣಸಿನಕಾಯಿ ಇದ್ದರೆ ರುಚಿ ಸೂಪರ್! ಈ ಮಂಡಕ್ಕಿ ಖಾರದ ಸ್ವಾದಿಷ್ಟಕರ ರುಚಿ ನೋಡಲು ದಾಸನಕೊಪ್ಪಕ್ಕೆ ಬರಬೇಕು. ಶಿರಸಿಯಿಂದ ಹಾವೇರಿಗೆ ತೆರಳುವಾಗ, ಶಿರಸಿ ತಾಲೂಕಿನ ಗಡಿ ಅಂಚಿನಲ್ಲಿ ಸಿಗುವ ಊರೇ ದಾಸನಕೊಪ್ಪ. ಇಲ್ಲಿನ ಸಣ್ಣ ಪೇಟೆಯ “ಮಂಜುನಾಥ ಹೋಟೆಲ್’ನಲ್ಲಿ ಕೊಡುವ ಮಂಡಕ್ಕಿಯ ಗಿರ್ಮಿಟ್‌ನ ರುಚಿಯನ್ನು ಸವಿದವರೇ ಬಲ್ಲರು. ಇಲ್ಲಿನ ಮಂಡಕ್ಕಿ ಅಥವಾ ಅವಲಕ್ಕಿ ಬಳಸಿ ಮಾಡಿಕೊಡುವ ಖಾರ, ಕಳೆದ ಐದಾರು ದಶಕಗಳಿಂದಲೂ ಫೇಮಸ್. ಸುತ್ತಮುತ್ತಲಿನ ಊರುಗಳಲ್ಲಿ, ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಕೇಳಿಕೊಂಡು ಬಂದು ತಿಂದು ಹೋಗುತ್ತಾರೆ.ಈ ಖಾರಾ ಮಂಡಕ್ಕಿ ಸ್ಟಾಲ್ ಮಾಲೀಕ, ಅಂಜು ರಾಮಣ್ಣ ಇಳಿಗೇರ. ಈ ರುಚಿಕರ ತಿನಿಸು ತಯಾರಿಸುವುದನ್ನು ತಂದೆಯಿಂದ ಕಲಿತದ್ದು ಎನ್ನುತ್ತಾರೆ ಅವರು. ದಿನವೊಂದಕ್ಕೆ ನೂರು ಸೇರಿಗೂ ಅಧಿಕ ಮಂಡಕ್ಕಿಗೆ ರಾಮಣ್ಣನವರೇ ಜೀರಿಗೆ, ಸಾಸಿವೆ, ಉಳ್ಳಾಗಡ್ಡಿ, ಮೆಣಸು ಎಲ್ಲ ಸೇರಿಸಿ ಹದಗೊಳಿಸುತ್ತಾರೆ. ಹಾಗೆ, ಪಾತ್ರೆಯ ಬಡ್ಡೆಯಲ್ಲಿ ತಿರುಗಿಸಿ, ಅದು ಹಸಿಯಾಗದೇ ಇರಲು ಹಾಗೂ ಸ್ವಾದಿಷ್ಟವಾಗಿರಲು ಬಟಾಣಿ ಹುಡಿಯನ್ನೂ ಮಿಕ್ಸ್ ಮಾಡುತ್ತಾರೆ. ಈ ಗಿರ್ಮಿಟ್ ಮಂಡಕ್ಕಿ ಖಾರವನ್ನು ಸಂಜೆ ವೇಳೆಗೆ ತಿಂದರೆ ಹೆಚ್ಚು ಸೂಕ್ತ ಎನ್ನುವುದು ಇಲ್ಲಿನ ಗ್ರಾಹಕರ ಅಭಿಪ್ರಾಯ. ಬೆಂಗಳೂರಿಗೂ ಪ್ರಯಾಣ ಬೆಳೆಸುತ್ತೆ
ದೂರದ ಕಾರವಾರ, ಸಾಗರ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ಬೆಂಗಳೂರಿಗೂ ಈ ಖಾರಾ ಮಂಡಕ್ಕಿ ರವಾನೆಯಾಗುತ್ತದೆ. ಒಂದು ಪ್ಲೇಟ್ ಮಂಡಕ್ಕಿಗೆ 15 ರೂ. ದರವಿದೆ. ನಿತ್ಯ ನೂರರಿಂದ ನೂರ ಇಪ್ಪತ್ತು ಪ್ಲೇಟ್ ಸೇಲ್ ಆಗುತ್ತದೆ. ವಾರದ ಎಲ್ಲಾ ದಿನವೂ ತೆರೆದಿರುತ್ತದೆ. ರಾಮಣ್ಣನವರಿಗೆ ಖಾರಾ ಮಂಡಕ್ಕಿ ಹೋಟೆಲು ಬದುಕು ಕಟ್ಟಿಕೊಟ್ಟಿದೆ. ಹಾವೇರಿಯಿಂದ ಶಿರಸಿಗೆ ಹೋಗುವ ಹಾದಿಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ, “ಮಂಜುನಾಥ ಹೋಟೆಲ್’ಗೆ ಭೇಟಿ ನೀಡಿ ಖಾರಾ ಮಂಡಕ್ಕಿ ರುಚಿ ಸವಿಯಲು ಮರೆಯದಿರಿ.
Related Articles
Advertisement
-ರಾಘವೇಂದ್ರ ಬೆಟ್ಟಕೊಪ್ಪ