Advertisement

ಹೆಣ್ಣು ಮಕ್ಕಳಿಗೂ ಸಮಾನ ಅವಕಾಶಗಳು ಸಿಗಬೇಕು

08:39 PM Feb 01, 2020 | Lakshmi GovindaRaj |

ಮೈಸೂರು: ಸಮಾಜದಲ್ಲಿ ಹೆಣ್ಣು ಮಕ್ಕಳಿಗೂ ಪುರುಷರಷ್ಟೇ ಸಮಾನವಾದ ಅವಕಾಶಗಳು ಸಿಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಜಯನಗರ 3ನೇ ಹಂತದಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಸಿದ್ದರಾಮಯ್ಯ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಸೌಲಭ್ಯವುಳ್ಳ ವಿದ್ಯಾರ್ಥಿನಿಲಯಗಳು ಬೇಕು: ಈಗಲೂ ಕೂಡ ಸಮಾಜದಲ್ಲಿ ಲಿಂಗ ತಾರತಮ್ಯ ನಡೆಯುತ್ತಿದ್ದು, ಇದರ ನಿವಾರಣೆಗೆ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ. ಹೆಣ್ಣು ಮಕ್ಕಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕಾದರೆ ಮೈಸೂರಿನಂತಹ ನಗರದಲ್ಲಿ ಉತ್ತಮ ಸೌಲಭ್ಯವುಳ್ಳ ವಿದ್ಯಾರ್ಥಿನಿಲಯಗಳು ಬೇಕಾಗಿವೆ ಎಂದರು.

ಅಕ್ಕ ಮಹಾದೇವಿ ಹೆಣ್ಣು ಮಕ್ಕಳಿಗೆ ಸ್ಫೂರ್ತಿ: ಇತ್ತೀಚೆಗೆ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ಕೆಲಸಮಾಡುತ್ತಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ ಫ‌ಲಿತಾಂಶದಲ್ಲಿಯೂ ಮುಂದೆ ಇದ್ದಾರೆ. ಹೆಣ್ಣು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಮಾರ್ಗದರ್ಶನ ಇರಬೇಕು. ಒಳ್ಳೆಯ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ. ಪುರುಷ ಪ್ರಧಾನ ಸಮಾಜದ ವಿರುದ್ಧ ಹೋರಾಡಿದ ಅಕ್ಕ ಮಹಾದೇವಿ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆ. ಕೀಳರಿಮೆ ಬಿಟ್ಟು ಗುರಿ ಶ್ರದ್ಧೆ ಪ್ರಯತ್ನದಿಂದ ಮೇಲೆ ಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿರಿ ಎಂದು ಕರೆ ನೀಡಿದರು.

ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಿ: ಮೈಸೂರು ನಗರ ಶಿಕ್ಷಣ ಕೇಂದ್ರವಾಗಿದ್ದು, ಎಲ್ಲರೂ ವಿದ್ಯಾವಂತರಾಗಿ ಉದ್ಯೋಗಕ್ಕೆ ಸೇರಿದ ಮೇಲೆ ಸಮಾಜಕ್ಕೆ ಸಾಧ್ಯವಾದಷ್ಟು ಸಹಾಯಮಾಡಿ, ಸಮಾಜ ನನಗೇನು ಮಾಡಿತು ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಮಾಡಿದೆ ಎನ್ನುವುದನ್ನು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ ದಾನಿಗಳನ್ನು ಅಭಿನಂದಿಸಿದರು.

ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಎಂ.ರಾಮಯ್ಯ, ವಕೀಲರಾದ ಶಿವಣ್ಣ, ನಿವೃತ್ತ ಐಎಎಸ್‌ ಅಧಿಕಾರಿ ಶಂಕರ್‌, ಕಾರ್ಯದರ್ಶಿ ಪುಟ್ಟಬಸವೇಗೌಡ, ನಿವೃತ್ತ ಕೆಎಎಸ್‌ ಅಧಿಕಾರಿ ಚಿಕ್ಕಸ್ವಾಮಿ, ಅಧಿಕಾರಿಗಳಾದ ಶಿವಣ್ಣ, ಸತ್ಯನಾರಾಯಣ, ಜಿ.ಎಸ್‌. ಸೋಮಶೇಖರ್‌, ಬಸವರಾಜು, ಕುಮಾರಸ್ವಾಮಿ, ಮುಖಂಡರಾದ ಮಂಜುಳಾ ಮಾನಸ, ನಗರಪಾಲಿಕೆ ಸದಸ್ಯ ಗೋಪಿ, ಕೆ.ಎಸ್‌.ಶಿವರಾಮ್‌, ಹರೀಶ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next