ಎಲ್ಲ ಫ್ರೆಂಡ್ಸ್ ಬಳಿಯೂ ಹೇಳ್ತಿದ್ದೆ , “ನಾಳೆ ಇಷ್ಟೊತ್ತಲ್ಲಿ ಊರಲ್ಲಿ ಇರ್ತೀನಿ’ ಎಂದು. ಆ ಸಂತೋಷದ ಭರದಲ್ಲಿ ಬೆಳಗಾಗಿದ್ದೇ ಗೊತ್ತಾಗಲಿಲ್ಲ. ಅಂತೂ ಹಾಸ್ಟೆಲ್‌ನಿಂದ ಮನೆಗೆ ಹೋಗುವ ಸಮಯ ಬಂದಾಯಿತು. ಎಲ್ಲರಿಗೂ ಬಾಯ್ ಬಾಯ್ ಹೇಳುತ್ತ ಹೊರಟೇ ಬಿಟ್ಟೆ. ನನ್ನೂರಿಗೆ ಉಡುಪಿಯಿಂದ ಮುಕ್ಕಾಲು ಗಂಟೆಯ ಪಯಣ ಅಷ್ಟೆ. ಅಲ್ಲಿಂದ ಒಳಗೆ ಮಲ್ಲಂದೂರು ಅನ್ನೋ ಹಳ್ಳಿಗೆ ಹೋಗಬೇಕು. ಆಗುಂಬೆಗೆ ಹೋಗಿ ಬಸ್ ಇಳಿದು ನೋಡ್ತೀನಿ, ನಮ್ಮೂರಿನವರು ಯಾರೂ ಸಹ ಕಾಣಾ¤ ಇರಲಿಲ್ಲ. ಅಲ್ಲೇ ಭಯವಾಗಿ ಪಕ್ಕದ ಅಂಗಡಿಯ ಅಂಕಲ್ ಹತ್ತಿರ ಕೇಳಿದೆ, “ಅಂಕಲ್ ನಮ್ಮೂರಿನವರು ಯಾರಾದರೂ ಇವತ್ತು ಪೇಟೆಗೆ ಬಂದಿದ್ರ’ ಅಂತ. ಅದಕ್ಕೆ ಅವರು, “ಇಲ್ಲ ಪುಟ್ಟ. ಬೆಳಿಗ್ಗೆಯಿಂದ ಯಾರು ಕಾಣಾ ಇಲ್ಲ. ನಿಮ್ಮೂರಿನಲ್ಲಿ ಏನೋ ಫಂಕ್ಷನ್ ಇದೆ ಅನ್ಸುತ್ತೆ. ಆಟೋದವರೆಲ್ಲ ಯಾರೂ ಕಾಣಿಲ್ಲ’ ಎಂದರು. ಒಂದೇ ಸಾರಿ ಜೀವ ಹೋದಂತೆ ಆಯಿತು ಹೆದರಿಕೆಯಾಗಿ, ಅಪ್ಪನಿಗೆ ಫೋನ್‌ಮಾಡಿದೆ. ವ್ಯಾಪ್ತಿ ಪ್ರದೇಶದ ಹೊರಗೆ ಅಂತ ಬಂತು, ಒಮ್ಮೆಲೇ ಅಳು ಬಂದಂತಾಯಿತು ಕಣ್ಣಲ್ಲೆಲ್ಲ ನೀರು ತುಂಬಿತ್ತು.
ಆ ಸಮಯದಲ್ಲಿ ತುಂಬಾ ಬಿಸಿಲು ಬೇರೆ ಇತ್ತು. ಅದಕ್ಕೆ ಅಂಗಡಿಯ ಅಂಕಲ್ ಹೇಳಿದ್ರು, “ಸ್ವಲ್ಪ ಹೊತ್ತು ಕಾದು ನೋಡು ಕಾಲೇಜಿನ ಹುಡುಗಿಯರು ಯಾರಾದರು ಬರಬಹುದು’ ಎಂದು.”ಸರಿ ಆಯ್ತು’ ಎಂದು ಅಲ್ಲೇ ಕಟ್ಟೆ ಮೇಲೆ ಕುಳಿತು ಕಾಯುತ್ತ ಇದ್ದೆ. ಅಂಗಡಿಗೆ ಬಂದವರೆಲ್ಲ ಕೇಳುತ್ತಿದ್ದರು, “ಯಾರ ಮಗಳಿವಳು. ಯಾರ ಮಗಳಿವಳು’ ಎಂದು. ಅವರೆಲ್ಲರು ಬಂದು ಬಂದು ಕೇಳುತ್ತಿದ್ದ ಒಂದೊಂದು ಪ್ರಶ್ನೆಗೂ ಉತ್ತರ ಕೊಡುವಾಗ ತುಂಬಾ ದುಃಖ ಬರುತ್ತಿತ್ತು. ಆ ದುಃಖವನ್ನು ತಡೆಯಲಾರದೆ ಸುಮ್ಮನೆ ಎದ್ದು ಅಳುತ್ತ ಭಯದಿಂದ ಹೊರಟುಬಿಟ್ಟೆ. ದೇವರನ್ನು ನೆನೆಸಿಕೊಳ್ಳುತ್ತ “ಯಾರಾದರೂ ಬರಬಾರದಾ. ಒಂದು ಆಟೋನಾದರೂ ಸಿಗಬಾರದೇ’ ಎಂದು ನನ್ನಲ್ಲಿಯೇ ಹೇಳಿಕೊಂಡೆ. ಬೆಳಿಗ್ಗೆ ಇದ್ದ ಆ ಸಂತೋಷಕ್ಕೂ ಮಧ್ಯಾಹ್ನ ಆದಂತಹ ಈ ದುಃಖಕ್ಕೂ ಎಂಥ ವ್ಯತ್ಯಾಸ !
ಸುಮ್ಮನೆ ಬೇಕೋ ಬೇಡ್ವೋ ಎಂದು ನಡೆಯುತ್ತಿದ್ದೆ. ಅಷ್ಟು ಹೊತ್ತಿಗೆ ಹಿಂದಿನಿಂದ “ಕೂ… ಕೂ…’ ಎಂದು ಯಾರೋ ಕಿರಿಚಿದಂತಾಯಿತು. ಅಬ್ಟಾ ! ಏನಾಯ್ತು? ಯಾರಿಗೆ? ಎಂದು ಹಿಂದೆ ತಿರುಗಿ ನೋಡಿದರೆ ನನ್ನ ಜೀವದ ಗೆಳತಿಯಾದ ಸುಚೇತಾ. ಅವಳು ಓಡೋಡಿ ಬರುತ್ತಿದ್ದಳು. “ನಿಂತ್ಕೊ ಸಿಂಚು’ ಎಂದು ಕೂಗಿ ಹೇಳಿದಳು. ಹಾಗೇ ಒಂದೇ ಸಾರಿ ಜೀವ ಬಂದವರ ಹಾಗೆ ನಿಂತುಬಿಟ್ಟೆ. ಅವಳು ನಾನು ಮತ್ತು ಆಕೆ ಅಂಗನವಾಡಿಯಿಂದ ಎಸ್‌ಎಸ್‌ಎಲ್‌ಸಿಯವರೆಗೆ ಅಕ್ಕಪಕ್ಕ ಕುಳಿತುಕೊಂಡವರು, ಒಂದೇ ಊರಿನವರು. ತುಂಬಾ ಕ್ಲೋಸ್ ಫ್ರೆಂಡ್ಸ್ ಬೇರೆ. ಶಾಲೆ ಮುಗಿದ ಮೇಲೆ ಆವತ್ತೇ ಮೊದಲು ಸಿಕ್ಕಿದ್ದು. ಪಿಯುಸಿಗೆ ಇಬ್ಬರೂ ಬೇರೆ ಬೇರೆ ಕಡೆ ಹೋಗಿದ್ದೆವು. ಅವಳು ಹಾಸ್ಟೆಲ್‌ನಲ್ಲಿ ಇದ್ದಳು. ನಾನು ಸಹ ಹಾಸ್ಟೆಲ್‌ನಲ್ಲಿ ಇದ್ದದ್ದು. ಹಾಗಾಗಿ, ಅವಳು ಊರಿಗೆ ಬಂದಿದ್ದ ದಿನ ನಾನು ಬಂದಿರುತ್ತಿರಲಿಲ್ಲ.
ನಾನು ಬಂದಿದ್ದ ದಿನ ಅವಳು ಬಂದಿರುತ್ತಿರಲಿಲ್ಲ. ಹಾಗಾಗಿ ಅವಳ ಮೊಬೈಲ್ ನಂಬರ್ ನನ್ನ ಬಳಿ ಇರಲಿಲ್ಲ. ನನ್ನ ನಂಬರ್ ಅವಳ ಬಳಿ ಇರಲಿಲ್ಲ. ಅವಳು ಸಹ ಶಿವಮೊಗ್ಗದಲ್ಲಿ ಹಾಸ್ಟೆಲ್‌ನಲ್ಲಿ ಇರುವುದು. ಅವಳು ಅಲ್ಲಿ ಬಸ್ ಇಳಿದು ಅಂಗಡಿಯಲ್ಲಿ ಏನೋ ತೆಗೆದುಕೊಳ್ಳಲು ಹೋದಾಗ ಅಂಗಡಿಯ ಅಂಕಲ್ ಹೇಳಿದರಂತೆ, “ನಿಮ್ಮ ಊರಿನ ಸಿಂಚನಾ ಇಷ್ಟೊತ್ತು ಇಲ್ಲೆ ಕಾದು ಕಾದು ಈಗ ತಾನೇ ಯಾರೂ ಇಲ್ಲ ಎಂದು ಒಬ್ಬಳೆ ಹೋದಳು’ ಅವಳಿಗೆ ಒಮ್ಮೆ ಖುಷಿಯಾಗಿ ಅಲ್ಲಿಂದ ಓಡಲು ಆರಂಭಿಸಿದವಳು ನನ್ನ ಹತ್ತಿರ ಬಂದಾದ ಮೇಲೆ ನಿಂತದ್ದಂತೆ. ಅವಳು ನಾನು ಸಿಕ್ಕಿದ್ದ ಆ ಸಂತೋಷದಲ್ಲಿ “ನಾವಿಬ್ಬರೂ ಮಾತಾಡಿಕೊಂಡು ಬಂದವರ ಹಾಗೇ ಬಂದ್ವಿ ಅಲ್ವಾ ಸಿಂಚು’ ಎಂದಳು. “ಹೌದಲ್ಲ’ ಎಂದೆ ನಾನು. ಅಲ್ಲೇ ಸ್ವಲ್ಪ ಹೊತ್ತು ಕುಳಿತು ಆಮೇಲೆ ನಡೆಯಲು ಆರಂಭಿಸಿದೆವು. ಸುಮಾರು ಐದಾರು ಕಿ.ಮೀ. ನಡೆಯಬೇಕಿತ್ತು.
ಸುಮ್ಮನೆ ನಡೆದುಕೊಂಡು ಹೋಗುತ್ತ ಮೊದಲು ಅವಳ ಕಾಲೇಜ್ ಬಗ್ಗೆ ಅವಳು ಹೇಳಿದಳು. ನಾನು ನಂತರ ನನ್ನ ಕಾಲೇಜ್ ಬಗ್ಗೆ ಹೇಳಿದೆ. ಆಮೇಲೆ “ನಾವು ಚಿಕ್ಕವರಿದ್ದಾಗ ಇದ್ದಷ್ಟು ಸಂತೋಷ, ಈವಾಗ ಇಲ್ಲ ಅಲ್ವಾ?’ ಎಂದಳು. “ಹೌದು ಅಲ್ವಾ?’ ಎಂದು ಹಳೆಯ ನೆನಪುಗಳನ್ನೆಲ್ಲ ನೆನೆಸಿಕೊಂಡೆವು. ಆ ಇಬ್ಬನಿಯ ಮುಂಜಾನೆಯಲ್ಲಿ ಶಾಲೆಗೆ ನಡೆದು ಬರುವಾಗ ಅಕ್ಕ ಪಕ್ಕ ಗಿಡದಲ್ಲಿ ಇದ್ದಂತಹ ಹಣ್ಣುಹಂಪಲನ್ನು ಕಿತ್ತು ತಿನ್ನುವುದು, ಬೇಗ ಮನೆಗೆ ಹೋಗಿ ಕುಂಟಬಿಲ್ಲೆ ಆಡುತ್ತಿದ್ದದ್ದು, ಇವತ್ತು ನೋಡಿದ ಧಾರಾವಾಹಿಗಳ ಬಗ್ಗೆ ಮಾರನೇ ದಿನ ಮಾತಾಡುತ್ತ ಹೋಗುವುದು, ರಜೆಯ ದಿನ ಇಬ್ಬರು ಒಟ್ಟಿಗೆ ಕುಳಿತು ನೋಟ್ಸ್ ಬರೆಯುವುದು ಮನೆಯಲ್ಲಿ ಏನಾದರೂ ಅಪರೂಪದ ತಿಂಡಿ ಮಾಡಿದರೆ ತಂದು ಇಬ್ಬರು ಹಂಚಿಕೊಂಡು ತಿನ್ನುತ್ತಿದ್ದಂಥ ಆ ಜೀವನ ಎಷ್ಟು ಚೆಂದ ಇತ್ತು ಅಲ್ವಾ ಎಂದಳು. ಹಾಗೇ ನಾವು ಯಾರನ್ನೂ ಮರೆತರೂ ಮೊದಲು ಓದಿದ ಆ ಸ್ಕೂಲ್ ಮತ್ತೆ ನಮಗೆ ಮೊದಲು ಪಾಠ ಮಾಡಿದಂತಹ ಆ ಸರ್‌ನ ಮತ್ತೆ ಮೊದಲು ಬಾಲ್ಯದಲ್ಲಿ ಇದ್ದಂತಹ ಫ್ರೆಂಡ್ಸ್‌ನ ಯಾವತ್ತೂ ಮರೆಯಕಾಗೋದಿಲ್ಲ.
ಇವರನ್ನೆಲ್ಲ ಯಾವತ್ತೂ ನೆನೆಸಿಕೊಳ್ಳುತ್ತಿರುತ್ತೇವೆ ನಿಜವಾದ ನೆನಪು ಅಂದ್ರೆ ಅದೇ ಅಲ್ವಾ’ ಎಂದಳು. ಹೀಗೆ ಮಾತಾಡುತ್ತ ದಾರಿ ಸಾಗಿದ್ದೇ ಗೊತ್ತಾಗಲಿಲ್ಲ. ಆ ದಿನ ಅವಳು ಸಿಕ್ಕ ಸಂತೋಷ ನಾ ಪಟ್ಟ ದುಃಖಕ್ಕೂ ಏನೋ ಸಂಬಂಧವಿದೆ ಎನಿಸುತ್ತಿದೆ. ಆ ದಿನ ನನಗೆ ಮರೆಯಲಾಗದ ದಿನವಾಗಿ ಉಳಿದಿದೆ.
– ಸಿಂಚನ ಎಂ. ಆರ್.
ದ್ವಿತೀಯ ಬಿ. ಎ., ಎಂಜಿಎಂ ಕಾಲೇಜು ಉಡುಪಿ.