Advertisement

ಸೀರಿಯಲ್‌ ಪ್ರಭಾವಕ್ಕೆ ಬಲಿಯಾದಳೇ ಬಾಲಕಿ?

06:35 AM Nov 30, 2017 | |

ಹರಿಹರ: ಕೆಲ ದಿನದ ಹಿಂದೆ ಬೆಂಕಿ ತಗುಲಿ 7 ವರ್ಷದ ಬಾಲಕಿ ಮೃತಪಟ್ಟ ಪ್ರಕರಣ ಈಗ ಹೊಸ ತಿರುವು ಪಡೆದಿದ್ದು ಹಲವು ಊಹಾ ಪೋಹಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ನಗರದ ಆಶ್ರಯ ಬಡಾವಣೆಯಲ್ಲಿ ಬೆಂಕಿ ತಗುಲಿ ಬಾಲಕಿ ಪ್ರಾರ್ಥನಾ ಮೃತಪಟ್ಟಿದ್ದಳು. ಘಟನೆ ನಡೆದು 18 ದಿನಗಳ
ನಂತರ ಬಾಲಕಿ ಸಾವಿಗೆ ಟಿವಿಯಲ್ಲಿ ಪ್ರಸಾರವಾಗುವ ಸೀರಿಯಲ್‌ (ಧಾರಾವಾಹಿ) ಕಾರಣ ಎಂಬ ಗುಲ್ಲೆದ್ದಿದೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಧಾರಾವಾಹಿಯೊಂದರ ದೃಶ್ಯ ನೋಡಿ ಬಾಲಕಿ ಬೆಂಕಿ ಹಚ್ಚಿ ಕೊಂಡಿದ್ದಳೆಂಬ ಸುದ್ದಿ ಹರಡಿದೆ. ಆದರೆ ಘಟನೆ ನಡೆದ ನಂತರ ಬಾಲಕಿ ತಾಯಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮಗಳು ಮೃತಪಟ್ಟಿದ್ದಾಳೆ ಎಂದು ದೂರು ದಾಖಲಿಸಿದ್ದರು.

ಚೈತ್ರಾ ಮತ್ತು ಮಂಜುನಾಥ್‌ ದಂಪತಿಯ 7 ವರ್ಷದ ಪುತ್ರಿ ಪ್ರಾರ್ಥನಾ ನ.11ರ ಮಧ್ಯಾಹ್ನ ಶಾಲೆಯಿಂದ ಬಂದು ಮನೆಯಲ್ಲಿ ಸಹೋದರಿಯೊಂದಿಗೆ ಆಟವಾಡುತ್ತಿದ್ದಾಗ ಬೆಂಕಿ ತಗುಲಿ ಗಾಯಗೊಂಡಿದ್ದಳು. ಕೂಡಲೇ ಬಾಲಕಿಯನ್ನು
ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ದಾವಣಗೆರೆ ಎಸ್‌.ಎಸ್‌.ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ನ.12ರ ಬೆಳಗಿನ ಜಾವ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಳು.

ಧಾರಾವಾಹಿ ಪರಿಣಾಮ: ಬಾಲಕಿ ಮೃತಪಟ್ಟು 18 ದಿನ ಕಳೆದ ನಂತರ ಆಕೆಯ ಪೋಷಕರು ಮಗಳ ಸಾವಿಗೆ ಬೇರೆಯದ್ದೇ ಆದ ಕಾರಣ ನೀಡುತ್ತಿದ್ದಾರೆ. ತಮ್ಮ ಮಗಳು ಸಾವಿಗೀಡಾಗಲು ಖಾಸಗಿ ವಾಹಿನಿಯೊಂದರ ಧಾರಾವಾಹಿಯಲ್ಲಿ ಪ್ರಸಾರವಾದ ದೃಶ್ಯವೇ ಕಾರಣ. ಅದರಲ್ಲಿ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ನನ್ನನ್ನು ಕಾಪಾಡುವಂತೆ ದೇವರ ಮೊರೆ ಇಡುವುದನ್ನು ನೋಡಿದ ಬಾಲಕಿ ತಾನೂ ಅದನ್ನು ಅನುಕರಿಸಲು ಹೋಗಿ ಅನಾಹುತ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ. ಬಾಲಕಿ ಪ್ರಾರ್ಥನಾ ನಗರದ ಸೆಂಟ್‌ ಮೇರೀಸ್‌ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಳು. ತಂದೆ ಮಂಜುನಾಥ್‌ ಕಟ್ಟಡ ಕಟ್ಟುವ ಕೆಲಸ ಮಾಡುತ್ತಿದ್ದರೆ, ತಾಯಿ ಚೈತ್ರಾ ಮನೆಗೆಲಸ ಮಾಡುತ್ತಿದ್ದಾರೆ. ಇವರ 2 ಹೆಣ್ಣು, ಒಂದು ಗಂಡು ಮಗುವಿನಲ್ಲಿ ಪ್ರಾರ್ಥನಾ ಹಿರಿಯ ಮಗಳಾಗಿದ್ದಳು. ಪ್ರಾರ್ಥನಾ ಆಸ್ಪತ್ರೆಯಲ್ಲಿ ಸಾವಿಗೀಡಾದ ದಿನ ತಾಯಿ ಚೈತ್ರಾ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಘಟನೆ ಕುರಿತಂತೆ ಅದರಲ್ಲಿ ವಿವರಣೆ ನೀಡಿದ್ದಾರೆ.

ಹೀಗೆ ದೂರು ದಾಖಲಾಗಿದ್ದರೂ ಇದೀಗ ಪೋಷಕರು ಬೇರೆಯದ್ದೇ ಕಾರಣ ಹೇಳುತ್ತಿರುವುದು ಯಾಕೆ ಎಂಬ ಅನುಮಾನ ಮೂಡಿದೆ. ಇನ್ನೊಂದೆಡೆ ಧಾರಾವಾಹಿ ನೋಡಿ ಬಾಲಕಿ ಪ್ರಭಾವಕ್ಕೊಳಗಾಗಿಯೇ ಈ ರೀತಿ ಮಾಡಿಕೊಂಡಿರಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Advertisement

ಬಾಲಕಿ ಪ್ರಾರ್ಥನಾ ಪ್ರಕರಣದಲ್ಲಿ ಧಾರಾವಾಹಿಯ ಪ್ರಭಾವವಿದೆ ಎಂದೆ ನಿಸುತ್ತಿಲ್ಲ. ಸಹಜವಾಗಿಯೇ ಮಕ್ಕಳಲ್ಲಿ ಕುತೂಹಲ ಹೆಚ್ಚು, ಅದರಂತೆಯೇ ಪ್ರಾರ್ಥನಾ ಬೆಂಕಿ ಕಡ್ಡಿ ಗೀರಿ ಪೇಪರ್‌ ಸುಡಲು ಮುಂದಾಗಿರುವ ಸಾಧ್ಯತೆಯಿದೆ.
–  ಶ್ರೀಧರ್‌, ಪಿಎಸ್‌ಐ, ಹರಿಹರ ನಗರ ಠಾಣೆ

ಪ್ರಾರ್ಥನಾ ಮನೆಯ ಸದಸ್ಯರು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ “ನಂದಿನಿ’ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದರು. ಅದರಲ್ಲಿ ಬರುವ ಪ್ರಸಂಗದಿಂದ ಪ್ರೇರಿತರಾಗಿ ಈ ಘಟನೆ ನಡೆದಿದೆ ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದಾರೆ.
– ಡಿ.ಹನುಮಂತಪ್ಪ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next