ಭೋಪಾಲ್:ಮದ್ಯದ ಅಮಲಿನಲ್ಲಿ ತಾಯಿಗೆ ಬೈದು, ಹೊಡೆಯುತ್ತಿದ್ದ ತಂದೆಗೆ 16 ವರ್ಷದ ಮಗಳು ಮರದ ಬ್ಯಾಟ್ ನಿಂದ ಹೊಡೆದು ಕೊಂದು ಹಾಕಿರುವ ಘಟನೆ ಭೋಪಾಲ್ ನಲ್ಲಿ ಬುಧವಾರ(ಅಕ್ಟೋಬರ್ 21,2020) ನಡೆದಿರುವುದಾಗಿ ವರದಿ ತಿಳಿಸಿದೆ.
ದಿನಂಪ್ರತಿ ತಾಯಿಗೆ ಹೊಡೆಯುತ್ತಿದ್ದ 45ವರ್ಷದ ತಂದೆಯ ವರ್ತನೆಯಿಂದ ರೋಸಿ ಹೋಗಿದ್ದ ಮಗಳು (16ವರ್ಷ) ಬಟ್ಟೆ ತೊಳೆಯಲು ಸಾಂಪ್ರದಾಯಿಕವಾಗಿ ಉಪಯೋಗಿಸುವ ಕಬ್ಬಿಣದ ರಿಂಗ್ ಗಳನ್ನು ಹೊಂದಿದ್ದ ಮರದ ಬ್ಯಾಟ್ ನಲ್ಲಿ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಘಟನೆ ನಂತರ ಪೊಲೀಸ್ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿ ವಿಷಯ ತಿಳಿಸಿ ಪೊಲೀಸರಿಗೆ ಶರಣಾಗಿರುವುವುದಾಗಿ ವರದಿ ತಿಳಿಸಿದೆ. ಈ ವ್ಯಕ್ತಿ ನಿರುದ್ಯೋಗಿಯಾಗಿದ್ದು, ಹಿರಿಯ ಮಗನ ಆದಾಯದಲ್ಲಿ ಕುಟುಂಬ ಜೀವನ ಸಾಗಿಸುತ್ತಿತ್ತು. ಹಿರಿಯ ಮಗ ಕಲ್ಲು ಕಟ್ಟುವ ಕೆಲಸ ಮಾಡುತ್ತಿರುವುದಾಗಿ ಬೇರಾಸಿಯಾ ಉಪವಿಭಾಗದ ಪೊಲೀಸ್ ಅಧಿಕಾರಿ ಕೆಕೆ ವರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ
ಹಿರಿಯ ಮಗನ ಮದುವೆ ವಿಚಾರದಲ್ಲಿ ಪತ್ನಿ ಜತೆ ಜಗಳವಾಡಿ, ಹಿಗ್ಗಾಮುಗ್ಗಾ ಹೊಡೆಯುತ್ತಿದ್ದಾಗ ಮಗಳು ಮರದ ಬ್ಯಾಟ್ ನಿಂದ ಹೊಡೆದು ಕೊಂದಿರುವುದಾಗಿ ವರ್ಮಾ ತಿಳಿಸಿದ್ದಾರೆ.