ಹುಣಸೂರು: ಪ್ರೀತಿಸಿ ಮದುವೆ ಆದ ಒಂದು ವರ್ಷಕ್ಕೆ ಪತಿ ಕೈಕೊಟ್ಟು,ಪತ್ನಿ ಆತಂತ್ರಕ್ಕೆ ಸಿಲುಕಿ, ಪತಿ ಸೇರಿ 16 ಮಂದಿ ವಿರುದ್ದ ದೂರು ದಾಖಲಿಸಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಅಶ್ವಿನಿ ನೊಂದ ಯುವತಿ ಆಗಿದ್ದು, ಪ್ರಿಯಕರ ಅಭಿಷೇಕ್ ಕುಟುಂಬದ ಒಪ್ಪಿಗೆಯಿಂದ ಮದುವೆಯಾಗಿದ್ದು,ಇದೀಗ ತನ್ನ ಪತಿ ಸೇರಿದಂತೆ ಇಡೀ ಕುಟುಂಬದವರು ಹಿಂಸೆ ನೀಡುತ್ತಿದ್ದಾರೆಂದು 16 ಮಂದಿ ವಿರುದ್ದ ದೂರು ನೀಡಿದ್ದಾಳೆ.
ಘಟನೆ ಹಿನ್ನೆಲೆ: ಟಿಕ್ ಟಾಕ್‌ನಲ್ಲಿ ಆರಂಭವಾದ ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿ ಅಶ್ವಿನಿ ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್‌ನನ್ನು 2021 ರ ಕೊರೊನಾ ವೇಳೆಯಲ್ಲಿ ದೇವಾಲಯವೊಂದರಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ದೂರಿನಲ್ಲಿ ಏನಿದೆ? :
ಮದುವೆಯಾದ ಕೆಲವೇ ದಿನಗಳಲ್ಲಿ ನಮ್ ಇಬ್ಬರನ್ನು ಬೇರ್ಪಡಿಸುವ ಪ್ರಯತ್ನ ನಡೆದಿದೆ. ನನ್ನನ್ನು ಗಂಡನ ಮನೆಯವರು ಮನೆಯಿಂದ ಹೊರಗೆ ಹಾಕಿದ್ದಾರೆ. ಇದನ್ನೆಲ್ಲಾ ಸಹಿಸಿಕೊಂಡು ದನದ ಕೊಟ್ಟಿಗೆಯಲ್ಲಿ ಜೀವನ ನಡೆಸಿದ್ದೇನೆ. ನನ್ನ ಅತ್ತೆ ಮಾವ ಗಂಡ ಇಲ್ಲದ ಸಮಯದಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಹೆತ್ತವರು ಹಾಗೂ ಸಂಬಂಧಿಕರ ಮಾತಿನಿಂದ ಪತಿರಾಯ ಕೈಕೊಟ್ಟಿದ್ದಾನೆ. ಇಷ್ಟೇ ಅಲ್ಲದೆ ಇಲ್ಲಸಲ್ಲದ ಚಾಡಿ ಹೇಳಿ ನನ್ನ ಮೇಲೆ ಗಂಡ ಅಭಿಷೇಕ್ ಕೂಡ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ವಾಟ್ಸಾಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆಂದು ಪ್ರಚಾರ ಮಾಡಿದ್ದಾರೆ. ಇದೇ ನೆಪ ಇಟ್ಟುಕೊಂಡು ಪತಿ ಅಭಿಷೇಕ್‌ಗೆ ಮತ್ತೊಂದು ಮದುವೆಗೆ ಸಂಬಂಧ ಹುಡುಕುತ್ತಿರುವುದಾಗಿ ಅಶ್ವಿನಿ ದೂರಿನಲ್ಲಿ ಆರೋಪಿಸಿದ್ದಾರೆ.
ಗಂಡ ಹಾಗೂ ಮನೆಯವರಿಂದ ತ್ಯಜಿಸಲ್ಪಟ್ಟ ಅಶ್ವಿನಿ ಇದೀಗ ಅತಂತ್ರಳಾಗಿದ್ದು, ಪ್ರೀತಿಸಿ ವಿವಾಹವಾದ ಜೋಡಿ ಒಂದು ವರ್ಷಕ್ಕೆ ಬೇರ್ಪಟ್ಟಿದೆ. ನ್ಯಾಯಕ್ಕಾಗಿ ಅಶ್ವಿನಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.