Advertisement

ಗಿರೀಶ್‌ ಕಾರ್ನಾಡರ ನಾಟಕಗಳು ಎಲ್ಲ ಕಾಲಘಟ್ಟಕ್ಕೂ ಅನ್ವಯ

09:53 PM Jun 14, 2019 | Lakshmi GovindaRaj |

ಮೈಸೂರು: ಗಿರೀಶ್‌ ಕಾರ್ನಾಡ್‌ ಅವರ ನಾಟಕಗಳು ಸಮಕಾಲೀನವಾಗಿದ್ದು, ಪ್ರಚಲಿತ ವಿದ್ಯಾಮಾನಗಳಿಗೆ ಹಾಗೂ ಎಲ್ಲ ಕಾಲಘಟ್ಟಕ್ಕೂ ಅನ್ವಯವಾಗಲಿವೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಂಗಾಯಣ ವತಿಯಿಂದ ರಂಗಾಯಣದ ಭೂಮಿಗೀತದಲ್ಲಿ ಆಯೋಜಿಸಿದ್ದ ಡಾ.ಗಿರೀಶ್‌ ಕಾರ್ನಾಡ್‌ ಹಾಗೂ ರಂಗ ಕಲಾವಿದೆ ರಂಗನಾಯಕಮ್ಮ ಅವರಿಗೆ ರಂಗ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಸ್ತುಬದ್ಧ ಜೀವನ: ರಂಗಭೂಮಿಗೆ ಗಿರೀಶ್‌ ಕಾರ್ನಾಡ್‌ ಅವರ ಕೊಡುಗೆ ಅಪಾರ. ಎಷ್ಟೋ ಜನ ಬದುಕಿದ್ದಾಗಲೇ ಸತ್ತಿರುತ್ತಾರೆ. ವ್ಯಕ್ತಿತ್ವ ಹೀನವಾಗಿದ್ದು, ಆತ ಎಷ್ಟೇ ದೊಡ್ಡ ಪ್ರಭಾವಿಯಾಗಿದ್ದರೂ ಅವರು ಸತ್ತ ಹಾಗೆಯೇ. ಆದರೆ, ಇನ್ನೂ ಕೆಲವರು ಸತ್ತಿದ್ದರೂ ಬದುಕಿರುತ್ತಾರೆ.

ಕಾರಣ ಅವರು ಈ ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಅವರ ವ್ಯಕ್ತಿತ್ವದ ಮೂಲಕ. ಈ ಸಾಲಿಗೆ ಗಿರೀಶ್‌ ಕಾರ್ನಾಡರು ಸೇರುತ್ತಾರೆ. ಅವರ ಶಿಸ್ತು ಬದ್ಧ ಜೀವನ ಹಾಗೂ ವಾಸ್ತವಕ್ಕೆ ಹತ್ತಿರವಾಗಿದ್ದ ಅವರ ಚಟುವಟಿಕೆಗಳು ನಮಗೆಲ್ಲ ಮಾದರಿಯಾಗಿವೆ ಎಂದರು.

ಅವರು ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ತಮ್ಮ ಪಾತ್ರ ಪೋಷಣೆ ಬಗ್ಗೆ ತೋರುತ್ತಿದ್ದ ಕಾಳಜಿ, ಬದ್ಧತೆ ಅನುಕರಣೀಯವಾದವು. ಅವರ ಕೊಡುಗೆ ರಂಗಭೂಮಿಗೆ ಸೀಮಿತವಾಗದೇ, ಸಾಹಿತ್ಯ, ಚಿತ್ರಕಲೆ, ಸಿನಿಮಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂತಹ ವ್ಯಕ್ತಿಗಳು ನಮಗೆ ಆದರ್ಶವಾಗಬೇಕು ಎಂದರು.

Advertisement

ಸಂಘಟಕ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ಗಿರೀಶ್‌ ಕಾರ್ನಾಡ್‌ ಹಾಗೂ ರಂಗನಾಯಕಮ್ಮ, ಗೊರವನ ಕುಣಿತ ಕಲಾವಿದ ಪುಟ್ಟಮಲ್ಲೇಗೌಡ ಅವರ ಕೊಡುಗೆ ಅಮೂಲ್ಯವಾದುದು.

ಕಾರ್ನಾಡರು ಶಿಸ್ತು, ಕೆಲಸದಲ್ಲಿ ಶ್ರದ್ಧೆ ಮತ್ತು ಎಲ್ಲಾ ಕೆಲಸದಲ್ಲಿ ಪೂರ್ವ ತಯಾರಿ ಮಾಡಿಕೊಳ್ಳುವ ಶಿಸ್ತುಬದ್ಧ ವ್ಯಕ್ತಿಯಾಗಿದ್ದರು. ಅವರು ತಮ್ಮ ತಾಯಿಯನ್ನು ಅಪಾರವಾಗಿ ಗೌರವಿಸುತ್ತಿದ್ದರು. ಆದರೆ ಕೆಲವರು ಅವರನ್ನು ಆರ್‌ಎಸ್‌ಎಸ್‌, ಬಿಜೆಪಿ ವಿರೋಧಿ ಎಂಬ ಅರೋಪವನ್ನೂ ಮಾಡುತ್ತಿದ್ದರು ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಸಮರ್ಥ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಸಿಕ್ಕಷ್ಟು ಅಂತಾರಾಷ್ಟ್ರೀಯ ಫೆಲೋಶಿಪ್‌ಗ್ಳು ಮತ್ಯಾರಿಗೂ ಸಿಗಲಿಲ್ಲ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ, ರಂಗಾಯಣ ಮಾಜಿ ನಿರ್ದೇಶಕ ಎಚ್‌. ಜನಾರ್ದನ್‌, ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.

25 ವರ್ಷ ಕಾರ್ಯನಿರ್ವಹಿಸಿದ ಏಕೈಕ ಮಹಿಳೆ ರಂಗನಾಯಕಮ್ಮ: ಇತ್ತೀಚೆಗೆ ನಿಧನರಾದ ರಂಗಭೂಮಿಯ ಖ್ಯಾತ ಕಲಾವಿದೆ ರಂಗನಾಯಕಮ್ಮ ಅವರನ್ನು ಸ್ಮರಿಸಿಕೊಂಡ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌ , ಒಂದು ಕಾಲದಲ್ಲಿ ಗುಬ್ಬಿ ಕಂಪನಿಯಲ್ಲಿ ಒಂದು ಪಾತ್ರವನ್ನು ನಿರ್ವಹಿಸುವುದೇ ಸಾಧನೆಯಾಗಿತ್ತು. ಆದರೆ, ರಂಗನಾಯಕಮ್ಮ ಅವರು ಗುಬ್ಬಿ ನಾಟಕ ಕಂಪನಿಯಲ್ಲಿ 25 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಮೊದಲ ಮಹಿಳೆಯಾಗಿದ್ದಾರೆ.

ಅವರು ಸದಾರಮೆ ಪಾತ್ರದಿಂದ ಹಿಡಿದು ಹಲವು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಕೇವಲ ಒಂದು ಪಾತ್ರಕ್ಕೆ ಸೀಮಿತವಾಗಿರಲಿಲ್ಲ. ಇದರಿಂದಲೇ ಅವರು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಅವರ ಕಲಾ ಸೇವೆಯನ್ನು ಗಮನಿಸಿ ಸರ್ಕಾರ ನಾಟಕರತ್ನ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next