Advertisement

ಕಾರ್ನಾಡ್‌ ಕನ್ನಡ ರಂಗಭೂಮಿ ವಿಶ್ವಮಟ್ಟಕ್ಕೇರಿಸಿದ ಶ್ರೇಷ್ಠ ರಂಗತಜ್ಞ, ಸಾಹಿತಿ : ಚಿನ್ನಾ

12:24 AM Jun 13, 2019 | Team Udayavani |

ಕಾಸರಗೋಡು: ಕನ್ನಡ ನಾಟಕ ಸೃಷ್ಟಿಯಲ್ಲಿ ತನ್ನ ವಿನೂತನ ತಂತ್ರವನ್ನು ಬಳಸಿ ಹೊಸ ಮನ್ವಂತರ ಆರಂಭಿಸಿದ ರಂಗತಜ್ಞ ಡಾ| ಗಿರೀಶ್‌ ಕಾರ್ನಾಡ್‌ ಪುರಾಣ, ಐತಿಹಾಸಿಕ ಘಟನೆಗಳಿಗೆ ಆಧುನಿಕ ಸ್ಪರ್ಶ ನೀಡಿ ನೂತನ ನಾಟಕ ಪ್ರಕಾರವನ್ನಾಗಿ ಸೃಜಿಸಿ ಅದಕ್ಕೆ ಜೀವ ತುಂಬಿದ ಖ್ಯಾತ ಸಾಹಿತಿ ಎಂದು ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ರಂಗಕರ್ಮಿ, ಸಿನೆಮಾ ಕಲಾವಿದ ಕಾಸರಗೋಡು ಚಿನ್ನಾ ಅವರು ಹೇಳಿದರು.

Advertisement

ಅವರು ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕನ್ನಡ ಅಧ್ಯಾಪಕ ಭವನದಲ್ಲಿ ಆಯೋಜಿಸಿದ ಡಾ| ಗಿರೀಶ್‌ ಕಾರ್ನಾಡ್‌ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.

ತಾರುಣ್ಯದಲ್ಲಿಯೇ ತಮ್ಮ ಹೊಸ ಆವಿಷ್ಕಾರದಿಂದ ಕನ್ನಡ ನಾಟಕ ಸಾಹಿತ್ಯ ಚರಿತ್ರೆಯಲ್ಲಿಯೇ ಹೊಸ ಅಧ್ಯಾಯ ತೆರೆದ ನಾಟಕಕಾರ. ರಂಗಭೂಮಿಯಲ್ಲಿ ಅದನ್ನು ಅಭೂತಪೂರ್ವವಾಗಿ ಪ್ರದರ್ಶಿಸಿ ನಾಟಕವನ್ನು ಅಸಂಖ್ಯಾತ ಪ್ರೇಕ್ಷಕ ಲೋಕ ಮನಸಾ ಮೆಚ್ಚಿ, ಅವರನ್ನು ಮಂತ್ರಮುಗ್ಧಗೊಳಿಸಿದ ಬಹುಭಾಷಾ ರಂಗತಜ್ಞ. ಯಯಾತಿಯಿಂದ ಮೊದಲ್ಗೊಂಡು ಇವರಿಂದ ಸೃಷ್ಟಿಸಲ್ಪಟ್ಟಿ ರುವ ತುಘಲಕ್‌, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಹಿಟ್ಟಿನ ಹುಂಜ, ಈಡಿಪಸ್‌ ಮೊದಲಾದವು ಇದಕ್ಕೆ ಜ್ವಲಂತ ನಿದರ್ಶನ. ಕೆಲವು ವಿಷಯಗಳಲ್ಲಿ ತನಗೆ ಹಾಗೂ ಹಲವರಿಗೆ ಅವರ ಕುರಿತು ಅಭಿಪ್ರಾಯ ವ್ಯತ್ಯಾಸವಿದ್ದರೂ ಸಾಹಿತ್ಯ ಲೋಕಕ್ಕೆ, ಕಲಾರಂಗಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ನಿಜಕ್ಕೂ ಡಾ| ಗಿರೀಶ್‌ ಕಾರ್ನಾಡ್‌ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿ ವಿಶ್ವಮಟ್ಟಕ್ಕೇರಿಸಿದ ಮೇರುನಟ, ರಂಗತಜ್ಞ, ಬಹುಭಾಷಾ ಪಾರಂಗತ, ಹಿರಿಯ ಸಾಹಿತಿ, ಪ್ರಖ್ಯಾತ ಸಿನೆಮಾ ಕಲಾವಿದ, ನಿರ್ದೇಶಕರೂ ಹೌದು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಗಡಿನಾಡ ಘಟಕದ ಅಧ್ಯಕ್ಷ ಎಸ್‌. ವಿ. ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಥೆಗಾರ, ಚಿಂತಕ ಶಶಿ ಭಾಟಿಯಾ ಕಾರ್ನಾಡರ ಆತ್ಮ ಚರಿತ್ರೆಯಲ್ಲಿ ಉಲ್ಲೇಖೀಸಲ್ಪಟ್ಟ ಕೆಲವು ಘಟನೆಗಳನ್ನು ವಿವರಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಸಾಲಿಯಾನ್‌, ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು, ಸಹಪ್ರಾಧ್ಯಾಪಕ ಡಾ| ರತ್ನಾಕರ ಮಲ್ಲಮೂಲೆ, ಲೇಖಕ ಸುಕುಮಾರ ಆಲಂಪಾಡಿ ಮೊದಲಾ ದವರು ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಕೆ.ವಿ. ರಮೇಶ್‌, ಎಂ. ಶಶಿಕಲಾ ಟೀಚರ್‌, ಬಾಲಕೃಷ್ಣ ಮಾಸ್ತರ್‌, ವಿರೂಪಾಕ್ಷ ಹೊಸದುರ್ಗ, ಹರಿಣಾಕ್ಷಿ, ನಾರತಿ, ಶ್ರೀಕಾಂತ್‌ ಮೊದಲಾದವರು ಉಪಸ್ಥಿತರಿದ್ದರು. ಪರಿಷತ್ತಿನ ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next