ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಟ ಗಿರೀಶ್ ಕಾರ್ನಾಡ್ (81) ಅವರು ಸೋಮವಾರ ವಿಧಿವಶರಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಗಿರೀಶ್ ಕಾರ್ನಾಡ್ ಅವರು ಸೋಮವಾರ ಮುಂಜಾನೆ ಬೆಂಗಳೂರಿನ ಲಾವೆಲ್ಲಾ ರಸ್ತೆಯ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಇಂದು ಮಧ್ಯಾಹ್ನದ ನಂತರ ಬೈಯಪ್ಪನಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಗಿರೀಶ್ ಕಾರ್ನಾಡ್ ಅವರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ರಘುನಾಥ್ ಮತ್ತು ಕೃಷ್ಣಾಬಾಯಿ ದಂಪತಿಗಳ ಮಗನಾಗಿ 1938ರ ಮೇ 19 ರಂದು ಮಹಾರಾಷ್ಟ್ರದ ಮಾಥೆರನ್ ನಲ್ಲಿ ಗಿರೀಶ್ ಕಾರ್ನಾಡ್ ಅವರು ಜನಿಸುತ್ತಾರೆ. ನಂತರ ಉತ್ತರ ಕನ್ನಡದ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಧಾರವಾಡದಲ್ಲಿ ಪ್ರೌಢ ಶಿಕ್ಷಣ ಪಡೆದರು. ನಂತರ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು.
ಕನ್ನಡ ಸಾಹಿತ್ಯ ಮತ್ತು ನಾಟಕ ಕ್ಷೇತ್ರಕ್ಕೆ ಮೇರು ಕೊಡುಗೆ ನೀಡಿದ ಗಿರೀಶ್ ಕಾರ್ನಾಡ್ ಅವರ ಹಯವದನ, ಯಯಾತಿ, ತುಘಲಕ್, ಅಗ್ನಿ ಮತ್ತು ಮಳೆ ನಾಟಕಗಳು ಪ್ರಸಿದ್ಧವಾದವು.
ಪ್ರಭುದ್ದ ನಟರಾಗಿದ್ದ ಅವರು ಅನೇಕ ಕನ್ನಡ, ಹಿಂದಿ ಚಿತ್ರಗಳಲ್ಲೂ ನಟಿಸಿದ್ದರು. ‘ಸಂಸ್ಕಾರ’, ‘ನಾಗಮಂಡಲ’, ‘ತಬ್ಬಲಿಯು ನೀನಾದೆ ಮಗನೆ’, ‘ಒಂದಾನೊಂದು ಕಾಲದಲ್ಲಿ’, ‘ಚೆಲುವಿ’, ‘ಕಾನೂರು ಹೆಗ್ಗಡತಿ’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರಗಳಾದ ‘ನಿಶಾಂತ್’, ‘ಮಂಥನ್’, ‘ಪುಕಾರ್’, ಇತ್ತೀಚಿನ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಮುಂತಾದ ಚಿತ್ರಗಳಲ್ಲಿ ತನ್ನ ಪ್ರಭುದ್ದ ನಟನೆಯಿಂದ ಮನೆಮಾತಾಗಿದ್ದರು.
ಗಿರೀಶ್ ಕಾರ್ನಾಡರು ತಮ್ಮ ಸಾಹಿತ್ಯ ಕೃಷಿ ಮತ್ತು ಚಲನ ಚಿತ್ರಗಳಿಗಾಗಿ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಚಿತ್ರ ನಟನೆ ಮತ್ತು ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರೆ.