Advertisement

ಗಿರಿಜನರಿಗೆ ನಾಡಿನಲ್ಲಿದೆ ನೆಮ್ಮದಿ

12:29 PM Aug 04, 2018 | |

ಎಚ್‌.ಡಿ.ಕೋಟೆ: ಕಾಡಿನಲ್ಲಿ ಪ್ರಾಣಿಗಳ ಮಧ್ಯೆ ಭಯದಲ್ಲೇ ಜೀವನ ನಡೆಸುತ್ತಿರುವ ಗಿರಿಜನರು ಕಾಡಿನಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಪುನರ್ವಸತಿ ಕಲ್ಪಿಸಿ ಮೂಲ ಸೌಕರ್ಯ ಒದಗಿಸುತ್ತಿದೆ ಎಂದು ಅರಣ್ಯ ಸಚಿವ ಆರ್‌.ಶಂಕರ್‌ ಹೇಳಿದರು.

Advertisement

ತಾಲೂಕಿನ ಭೀಮನಹಳ್ಳಿ ಸಮೀಪವಿರುವ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಕೇಂದ್ರದ ಸ್ಥಳ ಪರಿಶೀಲಿಸಿ ಮಾತನಾಡಿದ ಸಚಿವರು, ಕಾಡನ್ನು ಬಿಟ್ಟು ಸ್ವಯಂ ಪ್ರೇರಿತರಾಗಿ ಹೊರಬಂದಿರುವ ನಿಮಗೆ ಸರ್ಕಾರ 15 ಲಕ್ಷ ರೂ. ವಿಶೇಷ ಪ್ಯಾಕೇಜ್‌ ಅಡಿ ವಸತಿ, ಬದುಕು ಕಟ್ಟಿಕೊಳ್ಳಲು ವ್ಯವಸಾಯಕ್ಕೆ ಭೂಮಿ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಅರಣ್ಯ ಇಲಾಖೆ ಮತ್ತು ಇನ್ನಿತರ ಇಲಾಖೆಗಳ ಸಹಕಾರದಲ್ಲಿ ಪೂರೈಸುತ್ತಿದ್ದು, ಅತ್ಯುನ್ನತವಾಗಿ ನಿರ್ಮಾಣವಾಗಿರುವ ಪುನರ್ವಸತಿ ಕೇಂದ್ರದಲ್ಲಿ ನಿರ್ಭೀತಿಯಾಗಿ ಜೀವನ ನಡೆಸಬಹುದು ಎಂದರು.

ತಾವು ಕಾಡಿನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿಲ್ಲ, ಈಗ ಸರ್ಕಾರ ನಿಮ್ಮನ್ನು ಮುಖ್ಯವಾಹಿನಿಗೆ ತರಲು ಕಾಡಿನಿಂದ ಹೊರಬಂದವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿದ್ದು, ನೀವು ಈಗ ಮಕ್ಕಳಿಗೆ ಸರ್ಕಾರದ ಗುಣಮಟ್ಟದ ಶಿಕ್ಷಣಕ್ಕಾಗಿ ತೆರೆ‌ದಿರುವ ಆಶ್ರಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ವಿದ್ಯಾವಂತರನ್ನಾಗಿ ಮಾಡಿ ಎಂದರು.

18 ವರ್ಷ ತುಂಬಿದವರಿಗೆ ಪ್ರತ್ಯೇಕ ಮನೆ: ಈಗ ಸರ್ಕಾರ ನೂತನವಾಗಿ ಭೀಮನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ತಲಾ 15 ಲಕ್ಷ ರೂ. ವ್ಯಯಿಸಿ, 210 ಸುಸಜ್ಜಿತ ಮನೆಗಳನ್ನು ಮಾಸ್ತಿಗುಡಿ ಗಿರಿಜನಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿದೆ.

ಈಗಾಗಲೇ ಈ ಪುನರ್ವಸತಿ ಕೇಂದ್ರಕ್ಕೆ ನಾಗರಹೊಳೆ, ಮತ್ತಿಗೂಡು, ಮಡಿಕೇರಿ, ನಾಗಾಪುರ ಇನ್ನಿತರ ಕಡೆಕಾಡಿನಲ್ಲಿ ವಾಸ ಮಾಡುತ್ತಿದ್ದ 72 ಗಿರಿಜನ ಕುಟುಂಬಗಳನ್ನು ಸ್ಥಳಾಂತರ ಮಾಡಿ, ಮೂಲ ಸೌಲಭ್ಯ ಕಲ್ಪಿಸಿದೆ. ನಾವು ಅಲ್ಲಿಗಿಂತ ಇಲ್ಲಿ ಚೆನ್ನಾಗಿದ್ದೇವೆ ಎಂದು ಇಲ್ಲಿನ ನಿವಾಸಿಗಳೇ ಹೇಳುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಹೇಳಿದರು.

Advertisement

ಈ ಮನೆಗಳಲ್ಲಿ ಒಂದು ಕುಟುಂಬ ಮಾತ್ರ ವಾಸ ಮಾಡಲು ಅವಕಾಶವಿದ್ದು, ಒಂದು ಮನೆಯಲ್ಲಿ ಏಳೆಂಟು ಜನರು ವಾಸಮಾಡಲು ಆಗುವುದಿಲ್ಲ. ಹೀಗಾಗಿ 18 ವರ್ಷ ತುಂಬಿದ ಮಕ್ಕಳಿಗೂ ಪ್ರತ್ಯೇಕ ಮನೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಾನು ಕೂಡ ಕಮಿಟಿ ಮುಂದೆ ಇದೇ ವಿಚಾರವನ್ನು ಮಂಡಿಸಿದ್ದೇನೆ ಎಂದರು.

ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿ: ಈ ವೇಳೆ ಗಿರಿಜನರು ಮಾತನಾಡಿ, 2006 ರಿಂದಲೇ ಅರಣ್ಯ ಹಕ್ಕು ಕಾಯ್ದೆ ಜಾರಿಯಾದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ನಾವು ಅರಣ್ಯದ ಒಳಗೆ ಹೋಗಿ ಕಿರು ಉತ್ಪನ್ನ ಸಂಗ್ರಹಿಸಲು ಬಿಡುತ್ತಿಲ್ಲ. ಹೀಗಾಗಿ ನಮಗೆ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಬೇಕೆಂದರು.

ಈ ಕುರಿತು ಸಚಿವರು ಅಧಿಕಾರಿಗಳ ಜೊತೆ ಸ್ಥಳದಲ್ಲೇ ಮಾಹಿತಿ ಪಡೆದುಕೊಂಡು, ಅರಣ್ಯ ಹಕ್ಕು ಕಾಯ್ದೆಯಲ್ಲಿ ಆಗಿರುವ ತೊಡಕುಗಳನ್ನು ತಿಳಿದುಕೊಂಡು ಕಾನೂನು ವ್ಯವಸ್ಥೆಗೆ ತೊಡಕಾಗದಂತೆ ಕಾನೂನುಬದ್ಧವಾಗಿ ಕಾಯ್ದೆ ಅನುಷ್ಠಾನಕ್ಕೆ ತರಲು ಸರ್ಕಾರದ ಗಮನಕ್ಕೆ ತನ್ನಿ. ತಾನು ಕೂಡ ಸರ್ಕಾರದ ಜೊತೆ ಚರ್ಚಿಸುತ್ತೇನೆ ಎಂದರು.

ರೈಲ್ವೆ ಕಂಬಿ ಅಳವಡಿಸಿ: ಭೀಮನಹಳ್ಳಿ ಮುಖಂಡರೊಬ್ಬರು, ಈಗಾಗಲೇ ಆನೆ ಹಾವಳಿಯಿಂದ ಅನೇಕ ಮಂದಿ ಸಾವಿಗೀಡಾಗಿದ್ದಾರೆ. ಈ ಭಾಗದ ವನ್ಯಜೀವಿ ವಲಯಕ್ಕೆ ರೈಲ್ವೆ ಕಂಬಿ ಅಳವಡಿಸಿ, ನಮ್ಮ ಪ್ರಾಣ ಉಳಿಸಿ, ನಿರ್ಭಯವಾಗಿ ಬದುಕಲು  ಅವಕಾಶ ಕಲ್ಪಿಸಬೇಕೆಂದು ಕೋರಿದರು.

1110 ಕೋಟಿ ರೂ. ಪ್ರಸ್ತಾವನೆ: ಕಾಡಿನ ಸುತ್ತಲು ರೈಲ್ವೆ ಕಂಬಿ ಅಳವಡಿಸಲು ಚಿಂತನೆ ಇದ್ದು, ದುಪ್ಪಟ ವೆಚ್ಚ ತಗಲುವುದರಿಂದ 1110 ಕೋಟಿ ರೂ. ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿದೆ. ಹಂತ-ಹಂತವಾಗಿ ರೈಲ್ವೆ ಕಂಬಿ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಬೇಕಾದ ಅನುದಾನ ಒದಗಿಸಲು ಸರ್ಕಾರ ಕೂಡ ಬದ್ಧವಾಗಿದೆ ಎಂದು ತಿಳಿಸಿದರು.

ಈ ವೇಳೆ ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್‌, ಜಿಪಂ ಮಾಜಿ ಸದಸ್ಯರಾದ ಚಿಕ್ಕವೀರನಾಯಕ, ಬಿ.ವಿ.ಬಸವರಾಜು, ತಾಪಂ ಸದಸ್ಯರಾದ ಅಂಕನಾಯಕ, ವಲಯ ಅರಣ್ಯಾಕಾರಿಗಳಾದ ಪ್ರಭುಲಿಂಗ, ವಿನಯ್‌, ಮಧುಸೂದನ್‌, ಎಸ್‌ಟಿಪಿಪಿಎಫ್‌ ವಲಯ ಅರಣ್ಯಾಕಾರಿಗಳಾದ ಸಂತೋಷ್‌ ಹೂಗಾರ್‌, ವಿನಯ್‌ಕುಮಾರ್‌ ಇತರರದ್ದರು.

ಸಚಿವರ ಭೇಟಿ ತಿಳಿಸದ್ದಕ್ಕೆ ಚಿಕ್ಕಮಾದು ಗರಂ: ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ಶುಕ್ರವಾರ ಅರಣ್ಯ ಸಚಿವರು ಪರಿಶೀಲನೆಗಾಗಿ ಬರುತ್ತಿರುವ ವಿಷಯ ಹಾಗೂ ಕಾರ್ಯಕ್ರಮದ ಬಗ್ಗೆ ಕ್ಷೇತ್ರದ ಶಾಸಕನಾದ ತಮಗೆ ತಿಳಿಸಿಲ್ಲ. ಕಾರ್ಯಕ್ರಮಕ್ಕೆ ತಮ್ಮನ್ನು° ಅಧ್ಯಕ್ಷನ್ನಾಗಿ ಮಾಡಿಕೊಂಡಿದ್ದೀರಿ. ನಮಗೂ ಸರ್ಕಾರದ ಸಚಿವರು ಬಂದಾಗ ಅವರನ್ನು ಸ್ವಾಗತಿಸುವುದು ಸೇರಿದಂತೆ ಇನ್ನಿತರ ಜವಾಬ್ದಾರಿಗಳಿವೆ.

ಈಗ ಕಾರ್ಯಕ್ರಮದ ಅಧ್ಯಕ್ಷತೆ ನೀಡಿದ್ದೀರಿ, ಕಾರ್ಯಕ್ರಮದ ರೂಪುರೇಷೆ ತಿಳಿಯದೇ ತಾನು ಏನು ಮಾಡಬೇಕು?, ಈ ರೀತಿ ಮೇಲಧಿಕಾರಿಗಳಾದ ನೀವು ಉದಾಸೀನಭಾವನೆಯಿಂದ ನಡೆದುಕೊಳ್ಳಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಶಾಸಕ ಅನಿಲ್‌ಚಿಕ್ಕಮಾದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next