Advertisement

ಬನ್ನೇರುಘಟ್ಟ ಉದ್ಯಾನಕ್ಕೆ ಬರಲಿದೆ ಜಿರಾಫ

11:18 AM Mar 11, 2018 | |

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ವಿಶೇಷ ಅತಿಥಿ ಜಿರಾಫೆ ಆಗಮನವಾಗಲಿದೆ. ಇದರಿಂದ ಇಡೀ ಉದ್ಯಾನವನಕ್ಕೆ ಮತ್ತಷ್ಟು ಮೆರೆಗು ಬರಲಿದ್ದು ಪ್ರವಾಸಿಗರನ್ನು ಆಕರ್ಷಿಸಲಿದೆ.
ಇದೇ ತಿಂಗಳ 13 ರಂದು ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಹೆಣ್ಣು ಜಿರಾಫೆಯನ್ನು ತರಸಿ ಕೊಳ್ಳಲಾಗುತ್ತಿದೆ.

Advertisement

ಮೈಸೂರು ಮೃಗಾಲಯದಲ್ಲಿನ ಮೂರು ವರ್ಷ ವಯಸ್ಸಿನ ಬಬ್ಲಿ ಉದ್ಯಾನವನಕ್ಕೆ ಆಗಮಿಸುತ್ತಿರುವ ವಿಶೇಷ ಅತಿಥಿ. ಕೃಷ್ಣರಾಜ ಮತ್ತು ಖುಷಿ ಜಿರಾಫೆಗೆ ಜನಿಸಿದ ಮರಿ ಇದಾಗಿದೆ. ಉದ್ಯಾನವನದ ಮುಖ್ಯದ್ವಾರದ ಎಡಭಾಗದಲ್ಲಿ ಸುಮಾರು ಎರಡೂವರೆ ಎಕರೆ ವಿಸ್ತೀರ್ಣದ ಬಯಲು ಆಲಯದಲ್ಲಿ ಜಿರಾಫೆ ಬಿಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸುತ್ತಲು ಕಂದಕದ ಜೊತೆಗೆ ಬೇಲಿ ಹಾಕಲಾಗಿದೆ. ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಸುಮಾರು 40 ಅಡಿ ಎತ್ತರದ ಹೊಲ್ಡಿಂಗ್‌ ರೂಮ್‌ ಸಹ ನಿರ್ಮಾಣ ಮಾಡಿ ಶುಚಿಗೊಳಿಸಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ನಾಲ್ಕು ಅಧಿಕಾರಿಗಳು ಜಿರಾಫೆಯನ್ನು ತರಲು ಸತತ ಪ್ರಯತ್ನ ನಡೆಸುತ್ತ ಬಂದಿದ್ದರು. ಮೈಸೂರು, ಆಂಧ್ರಪ್ರದೇಶ ಅಲ್ಲದೇ
ವಿದೇಶದಿಂದಲೂ ಜಿರಾಫೆ ತರುವ ಪ್ರಯತ್ನ ನಡೆಸಿ ವಿಫ‌ಲವಾಗಿದ್ದರು. ವಿದೇಶದಿಂದ ಜಿರಾಫೆ ತರಲು ವಿಮಾನದ ವೆಚ್ಚವೇ ಸುಮಾರು 1 ಕೋಟಿ ರೂ. ತಗಲುತಿತ್ತು. ಇದರಿಂದ ವಿದೇಶದಿಂದ ತರುವ ಪ್ರಯತ್ನ ವಿಫ‌ಲವಾಯಿತು.

ಸದ್ಯ ಮೃಗಾಲಯ ಪ್ರಾಧಿಕಾರಕ್ಕೆ ರವಿ ಸದಸ್ಯ ಕಾರ್ಯದರ್ಶಿಯಾದ ಬಳಿಕ ಜಿರಾಫೆ ತರುವ ಹಾದಿ ಸುಲಭವಾಯಿತು. ಕಳೆದ ಮೂರು ತಿಂಗಳ ಹಿಂದೆಯೇ ಮೈಸೂರು ಮೃಗಾಲಯದಿಂದ ಜಿರಾಫೆ ನೀಡುವ ಹಸಿರು ನಿಶಾನೆ ಸಿಕ್ಕ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಇಬ್ಬರ ಸಿಬ್ಬಂದಿಯನ್ನು ಮೈಸೂರು ಮೈಗಾಲಯಕ್ಕೆ ಕಳುಹಿಸಿ ಅವರಿಗೆ ತರಬೇತಿ ನೀಡಿ ಪ್ರಾಣಿ ಜೊತೆ ಬೆರೆಯುವಂತೆ ಮಾಡಲಾಗಿದೆ. 

ಬನ್ನೇರುಘಟ್ಟ ಉದ್ಯಾನವನದ ಕಾರ್ಯನಿರ್ವಾಹಕ ನಿದೇರ್ಶಕ ಗೋಕುಲ್‌ ಉದಯವಾಣಿ ಯೊಂದಿಗೆ ಮಾತನಾಡಿ, ಜಿರಾಫೆ ತರಿಸಿಕೊಳ್ಳುವ ಪ್ರಯತ್ನ ಹಲವು ವರ್ಷಗಳಿಂದ ಇತ್ತು. ಸದ್ಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರ ಸಹಕಾರದಿಂದ ಒಂದು ಜಿರಾಫೆಯನ್ನು ಇದೇ 13 ರಂದು ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
 
ಬಬ್ಲಿ ಮತ್ತು ಮೇರಿ ಎಂಬ ಎರಡು ಜಿರಾಫೆಗಳನ್ನು ಮೈಸೂರಿನಿಂದ ಬನ್ನೇರುಘಟ್ಟಕ್ಕೆ ನೀಡಲು ಅನುಮತಿ ನೀಡಲಾಗಿದೆ. ಸದ್ಯ ಬಬ್ಬಿ ಜಿರಾಫೆ ತರಿಸಿಕೊಳ್ಳಲಾಗುತ್ತಿದೆ. ನಂತರ ಕೆಲ ದಿನಗಳ ಬಳಿಕ ಮೇರಿಯನ್ನು ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಉದ್ಯಾನವನದ ವೈದ್ಯಾಧಿಕಾರಿ ಉಮಾಶಂಕರ್‌ ಮಾತನಾಡಿ, ನಮ್ಮಲ್ಲಿದ್ದ ಶಂಕರ ಮತ್ತು ಬಸವ ಎಂಬ ಇಬ್ಬರನ್ನು ಮೈಸೂರಿಗೆ ಕಳುಹಿಸಿ ತರಬೇತಿ ಕೊಡಿಸಲಾಗಿದೆ. ಹಾಗೆ ಇಲ್ಲಿಗೆ ಬರುತ್ತಿರುವ ಪ್ರಾಣಿಗಳೊಂದಿಗೆ ಅವರು ಹೊಂದಿಕೊಂಡಿದ್ದಾರೆ. ಇದರಿಂದ ಪ್ರಾಣಿಗೆ ಹೊಸ ಜಾಗವಾದರೂ ಜಿರಾಫೆ ಪಾಲಕರು ಮಾತ್ರ ಹಳಬರಾಗಿರುತ್ತಾರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next