Advertisement
ಯೂಸುಫ್ ಗಮಿ ಅವರು ಕಳೆದ ವರ್ಷ ಈ ಕಾಯಕ ಆರಂಭಿಸಿದರು. ಇರುವುದು 14 ಸೆಂಟ್ಸ್ ಜಾಗ. ಅದರಲ್ಲಿ ಮನೆ ಇದೆ. ಕೆಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಮನೆ ಮೇಲೆ ಒಟ್ಟು 2,000 ಚದರಡಿಯಷ್ಟು ವಿಸ್ತೀರ್ಣದ ವಿಶಾಲ ಜಾಗವಿದೆ. ಬೈಕ್ ದುರಸ್ತಿಗೆಂದು ಹೋದಾಗ ಮನೆಯವರು ಬೆಂಡೆ ನೀಡಿದ್ದರು. ಅದನ್ನು ಬೀಜವಾಗಿಸಿದ ಅವರು ಹತ್ತಾರು ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಬೆಳೆಸಲು ಆರಂಭಿಸಿದರು.
ತೊಟ್ಟೆಯಲ್ಲಿ ಸ್ವಲ್ಪ ಭಾಗ ಕೆಂಪು ಮಣ್ಣು. ಮತ್ತೊಂದಷ್ಟು ಭಾಗ ಸುಡುಮಣ್ಣು. ಮನೆಯ ಕಸ ಸುಡುಮಣ್ಣಾಗಿಸಿದ ಅವರು
ಅದನ್ನು ಕೃಷಿಗೆ ಬಳಸಿ ಬೆಂಡೆ ಬೀಜ ಬಿತ್ತಿದರು. ತಾರಸಿಯಲ್ಲಿ ಪಾಚಿ ಬರುತ್ತಿತ್ತು. ಅದನ್ನು ಮಳೆಗಾಲದಲ್ಲಿ ಒಂದು ಕಡೆ
ಸಂಗ್ರಹಿಸಿ, ರಾಶಿ ಹಾಕಿದ್ದರು. ಬೆಂಡೆ ಬೀಜ ಈ ಪಾಚಿಯಲ್ಲಿ ಬೆಳೆಯಲಾರಂಭಿಸಿತು. ಅತ್ಯಂತ ಹುಲುಸಾಗಿ ಬೆಳೆದ ಗಿಡವನ್ನು ನೋಡಿ ಆಶ್ಚರ್ಯವಾಯಿತು. ಇತರ ಕೃಷಿಗೂ ಗೊಬ್ಬರವಾಗಿ ಪಾಚಿ ಬಳಸಿದರು. ಅದು ಯಶಸ್ವಿಯಾಯಿತು. ತಾರಸಿಯ ಪಾಚಿಯನ್ನೇ ಗೊಬ್ಬರವಾಗಿಸಿದ ಅವರ ಅನುಭವ ಮತ್ತು ಯೋಚನೆ ಶ್ಲಾಘನೀಯವಾದುದು. ದ್ರಾಕ್ಷಿಯೂ ಇತ್ತು
ದ್ರಾಕ್ಷಿ, ನಿಂಬೆ, ಕಹಿಬೇವು, ತೆಂಗು ಎಲ್ಲವೂ ಇಲ್ಲಿದೆ. ಇರುವ ಸ್ವಲ್ಪ ಜಾಗದಲ್ಲಿ ಮೆಕ್ಯಾನಿಕ್ ಯೂಸುಫ್ ಅವರ ಕೃಷಿಯ ಉತ್ಪನ್ನಗಳಿಗೆ ಭಾರೀ ಬೇಡಿಕೆಯೂ ಇದೆ. ಸಾವಯವ ಬೆಂಡೆ, ತೊಂಡೆಕಾಯಿಗಳನ್ನು ಮೆಕ್ಯಾನಿಕ್ ಶಾಪ್‌ನಲ್ಲಿ ತಂದಿಟ್ಟರೆ ತತ್ ಕ್ಷಣ ಮಾರಾಟವೂ ಆಗುತ್ತಿದೆ. ಇವರಿಗೆ ಮಾಲಕರಾದ ಚಂದ್ರಶೇಖರ ಭಟ್ ಪಡಾರು ಅವರ ಬೆಂಬಲವೂ ಇದೆ.
Related Articles
ಈ ಬಾರಿ 100 ಬೆಂಡೆ ಸಸಿಗಳನ್ನು ಬೆಳೆಸಿದರು. ಪ್ರತಿದಿನವೂ ಪ್ರತಿ ಗಿಡದಲ್ಲಿಯೂ ಒಂದೊಂದು ಬೆಂಡೆ ಪಡೆಯುವ ಗುರಿ ಅವರದ್ದು. ಅದು ಯಶಸ್ವಿಯಾಗಿದೆ. ಈ ತನಕ ಅದೇ ಪ್ರಮಾಣದಲ್ಲಿ ಲಭ್ಯವಾಗಿದೆ. ಆಗಸ್ಟ್ ತಿಂಗಳಲ್ಲಿ ಬಿತ್ತಿದ ಬೀಜದಲ್ಲಿ ಒಂದು ತಿಂಗಳ ಬಳಿಕ ಬೆಳೆ ಪಡೆಯುವ ಅವರ ಗುರಿಯೂ ಈಡೇರಿದೆ ಮತ್ತು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನೀರಿನ ಬರ ಬಾರದೇ ಇದ್ದರೆ ಅಲ್ಲಿ ತನಕವೂ
ಬೆಳೆಯನ್ನು ಪಡೆಯಬೇಕೆಂಬ ಆಶಯ ಅವರಲ್ಲಿದೆ.
Advertisement
ಪಕ್ಕದಲ್ಲಿ ತೊಂಡೆತಾರಸಿಯಿಂದ ತೊಂಡೆ ಚಪ್ಪರವನ್ನೂ ಇಳಿಸಲಾಗಿದೆ. ಮನೆ ಮುಂದಿನ ಭಾಗದಲ್ಲಿ ತೊಂಡೆ ಬುಡವೆದ್ದು ತಾರಸಿಗೇರುತ್ತದೆ. ಆ ಚಪ್ಪರದಲ್ಲಿ ತೊಂಡೆಕಾಯಿಯನ್ನೂ ಪಡೆಯುತ್ತಿರುವ ಅವರು ಈ ಕೃಷಿಗಾಗಿ ಆಡಿನ ಹಿಕ್ಕೆಯನ್ನು ಬಳಸುತ್ತಾರೆ. ಅದಕ್ಕಾಗಿ ಆಡು ಮತ್ತು ಕೋಳಿಯನ್ನೂ ಸಾಕುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೇ ಹಿತಮಿತವಾಗಿ ಬೆಳೆಸುವ ಇವರ ಕೃಷಿ ಇತರರಿಗೆ
ಮಾದರಿಯಾಗಿದೆ. ಉದಯಶಂಕರ್ ನೀರ್ಪಾಜೆ