Advertisement

ODI ರ‍್ಯಾಂಕಿಂಗ್: ಬೌಲಿಂಗ್,ಬ್ಯಾಟಿಂಗ್ ಎರಡರಲ್ಲೂ ಅಗ್ರಸ್ಥಾನದಲ್ಲಿ ಭಾರತೀಯರು

06:58 PM Nov 08, 2023 | Team Udayavani |

ಹೊಸದಿಲ್ಲಿ: ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಬುಧವಾರ ಐಸಿಸಿ ಏಕದಿನ ರ‍್ಯಾಂಕಿಂಗ್ ನಲ್ಲಿ ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಅಲಂಕರಿಸಿದ್ದಾರೆ.

Advertisement

ಗಿಲ್ ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪಾಕಿಸ್ಥಾನದ ನಾಯಕ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿದ್ದು, ಸಿರಾಜ್ ಅವರು ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ಸ್ಥಾನಪಲ್ಲಟಗೊಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದ ಅತ್ಯಮೋಘ ಅಭಿಯಾನದ ವೇಳೆ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ನಂ.1 ಏಕದಿನ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಭಾಜನರಾದ ದೇಶದ ನಾಲ್ಕನೇ ಆಟಗಾರ ಗಿಲ್ ಅವರಾಗಿದ್ದಾರೆ. ಗಿಲ್ ವಿಶ್ವ ಕಪ್ ನಲ್ಲಿ ಶ್ರೀಲಂಕಾ ವಿರುದ್ಧ 92 , ದಕ್ಷಿಣ ಆಫ್ರಿಕಾ ವಿರುದ್ಧ 23 ರನ್ ಸ್ಕೋರ್‌ ಮಾಡಿ ಆರು ಇನ್ನಿಂಗ್ಸ್‌ಗಳಿಂದ ಒಟ್ಟು 219 ರನ್‌ಗಳನ್ನು ಗಳಿಸಿದ್ದಾರೆ.

ವಿಶ್ವ ಕಪ್‌ನಲ್ಲಿ ಎಂಟು ಇನ್ನಿಂಗ್ಸ್ ಗಳಿಂದ ಒಟ್ಟು 282 ರನ್‌ಗಳನ್ನು ಬಾಬರ್ ಗಳಿಸಿದ್ದು,ಎರಡು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯ ವಿಶ್ವದ ನಂ.1 ಶ್ರೇಯಾಂಕದ ಏಕದಿನ ಬ್ಯಾಟ್ಸ್ ಮ್ಯಾನ್ ಎಂಬ ಪಟ್ಟದಿಂದ ಕೆಳಗಿಳಿದಿದ್ದು, ಗಿಲ್‌ ಅವರಿಗಿಂತ ಆರು ರೇಟಿಂಗ್ ಪಾಯಿಂಟ್‌ಗಳನ್ನು ಕಡಿಮೆ ಹೊಂದಿದ್ದು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

ಭಾರತದ ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಅಮೋಘ ಆಟದ ನಂತರ ನಾಲ್ಕನೇ ಸ್ಥಾನಕ್ಕೆ ಏರಿದ್ದು, ನಾಯಕ ರೋಹಿತ್ ಶರ್ಮ ಆರನೇ ಸ್ಥಾನದಲ್ಲಿದ್ದಾರೆ.ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ ಕೂಡ 17 ಸ್ಥಾನ ಏರಿಕೆ ಕಂಡು 18ನೇ ಸ್ಥಾನಕ್ಕೆ ಬಂದಿದ್ದಾರೆ.

Advertisement

ಪಾಕಿಸ್ಥಾನದ ಆರಂಭಿಕ ಆಟಗಾರ ಫಖರ್ ಜಮಾನ್ ಮೂರು ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ, ಅಫ್ಘಾನಿಸ್ಥಾನದ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ ಆರು ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ ತಲುಪಿ ಉತ್ತಮ ಸಾಧನೆ ಮಾಡಿದ್ದಾರೆ.

ಬೌಲರ್‌ಗಳಲ್ಲಿ, ಸಿರಾಜ್ ಪಂದ್ಯಾವಳಿಯಲ್ಲಿ ಇದುವರೆಗಿನ ತನ್ನ ಪ್ರಭಾವಶಾಲಿ ಪ್ರಯತ್ನದಿಂದ ಅಗ್ರ ಸ್ಥಾನಕ್ಕೆರಿದ್ದು, ಎಂಟು ಪಂದ್ಯಗಳಲ್ಲಿ 5.23 ರ ಎಕಾನಮಿ ದರದಲ್ಲಿ10 ವಿಕೆಟ್‌ಗಳನ್ನು ಪಡೆದು ಕೇಶವ್ ಮಹಾರಾಜ್ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿದ್ದಾರೆ.

ಭಾರತದ ಬೌಲರ್‌ಗಳ ಪೈಕಿ ವೇಗಿ ಜಸ್ಪ್ರೀತ್ ಬುಮ್ರಾ ಮೂರು ಸ್ಥಾನಗಳ ಪ್ರಗತಿ ಸಾಧಿಸಿ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ, ಮೊಹಮ್ಮದ್ ಶಮಿ ಏಳು ಸ್ಥಾನಗಳನ್ನು ಜಿಗಿದು ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಮೂರು ಸ್ಥಾನ ಮೇಲೇರಿ ನಾಲ್ಕನೇ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 8 ಸ್ಥಾನ ಮೇಲೇರಿ 19ನೇ ಸ್ಥಾನಕ್ಕೆ ತಲುಪಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅಗ್ರಸ್ಥಾನದಲ್ಲಿದ್ದು, ರವೀಂದ್ರ ಜಡೇಜಾ 10ನೇ ಸ್ಥಾನದಲ್ಲಿದ್ದಾರೆ. ಜಡೇಜಾ ಎಂಟು ವಿಶ್ವಕಪ್ ಪಂದ್ಯಗಳಿಂದ ಒಂದು ಬಾರಿ ಐದು ವಿಕೆಟ್ ಸೇರಿದಂತೆ 14 ವಿಕೆಟ್‌ಗಳನ್ನು (3.76 ರನ್ ರೇಟ್), ನಾಲ್ಕು ಇನ್ನಿಂಗ್ಸ್‌ಗಳಲ್ಲಿ 55.50 ಸರಾಸರಿಯಲ್ಲಿ 111 ರನ್‌ಗಳನ್ನು ಪೇರಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಭಾರತದ ನಾಲ್ಕನೇ ಪಂದ್ಯದಲ್ಲಿ ಪಾದದ ಗಾಯಕ್ಕೆ ಸಿಲುಕಿ ವಿಶ್ವಕಪ್ ಕೂಟದಿಂದ ಹೊರ ಬಿದ್ದಿರುವ ಹಾರ್ದಿಕ್ ಪಾಂಡ್ಯ 13ನೇ ಸ್ಥಾನಕ್ಕೆ ಕುಸಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next