Advertisement

ಗಿರಿರಾಜ ಕೋಳಿ ಮರಿಗಳ ವಿತರಣೆಗೆ ಸಿದ್ಧತೆ

12:44 PM Aug 25, 2020 | Suhan S |

ದೇವನಹಳ್ಳಿ: ಜಿಲ್ಲೆಯ ಪಶುಪಾಲನೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ ಸರ್ಕಾರದ ಯೋಜನೆ ಇಲ್ಲವಾದರೂ, ಇಲಾಖೆಯಿಂದ ಉಚಿತವಾಗಿ ಗಿರಿರಾಜ ತಳಿ ಕೋಳಿ ಮರಿಗಳ ವಿತರಣೆಗೆ ಪೂರ್ವ ಸಿದ್ಧತೆ ನಡೆದಿದೆ.

Advertisement

ಗಿರಿರಾಜ ಕೋಳಿ ಮರಿ 5 ತಿಂಗಳ ನಂತರ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ. ಈ ಕೋಳಿ ಗಳು, ಹುಳು ಉಪ್ಪಟೆ ತಿನ್ನುವುದರಿಂದ ಸುತ್ತ ಮುತ್ತಲಿನ ಪರಿಸರವೂ ಶುಚಿಯಾಗಿರುತ್ತದೆ. ಹಕ್ಕಿಜ್ವರ ಸೇರಿ ಯಾವ ರೋಗಗಳಿಗೂ ಸುಲಭವಾಗಿ ತುತ್ತಾಗುವುದಿಲ್ಲ. ಪ್ರಥಮ ಹಂತದಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಿಂದ 400 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಓರ್ವ ಫಲಾನುಭವಿಗೆ 10ರಂತೆ ಕೋಳಿ ಮರಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಕುಕ್ಕುಟೋದ್ಯಮ ಅಭಿವೃದ್ಧಿ ನಿಗಮದಿಂದ ಕೋಳಿ ಮರಿ ಖರೀದಿಸಲಾಗುತ್ತಿದೆ. ಸುಮಾರು 100 ರಿಂದ 150 ಮೊಟ್ಟೆ ಇಡುವ ಗಿರಿರಾಜ ಕೋಳಿ 6ರಿಂದ 8 ಕೆ.ಜಿ. ತೂಕವಿರುತ್ತದೆ. ನಾಟಿ ಕೋಳಿಗಳು ಸಾಮಾನ್ಯವಾಗಿ 2 ಕೆ.ಜಿ. ತೂಗಿದರೆ ಹೆಚ್ಚು. ಹೀಗಾಗಿ ಗಿರಿರಾಜ ಕೋಳಿ ಸಾಕುವುದರಿಂದ ಲಾಭ ಹೆಚ್ಚು, ನಾಟಿ ಕೋಳಿ ಮತ್ತು ಗಿರಿರಾಜ ತಳಿ ನಡುವಿನ ವ್ಯತ್ಯಾಸವೆಂದರೆ, ಗಿರಿರಾಜ ಬೇಗ ಮಾಂಸ ಕಟ್ಟುತ್ತದೆ. ಆದ್ದರಿಂದ ಇದರ ಸಾಕಾಣಿಕೆಗೆ ಹೆಚ್ಚು ಒಲವು ವ್ಯಕ್ತವಾಗುತ್ತದೆ. 40 ವಾರಗಳಲ್ಲಿ ಹೆಣ್ಣುಕೋಳಿ 3 ರಿಂದ 3.5ಕೆ.ಜಿ ಹಾಗೂ ಗಂಡು ಕೋಳಿ (ಹುಂಜ) 4 ರಿಂದ 5 ಕೆ.ಜಿ. ತೂಕವಿರುತ್ತದೆ. ಈ ಕೋಳಿ ಮೊಟ್ಟೆ ಸರಾಸರಿ 55ಗ್ರಾಂ ತೂಕವಿರುತ್ತದೆ. ಒಂದು ಮೊಟ್ಟೆ ದರ ಸಾಮಾನ್ಯವಾಗಿ 10 ರೂ.ವಾಗಲಿದೆ. ಮೊಟ್ಟೆ ಮಾಂಸ ಎರಡಕ್ಕೂ ಗಿರಿರಾಜ ಕೋಳಿಗೆ ಹೆಚ್ಚು ಬೇಡಿಕೆ ಇದೆ. ಈ ಕೋಳಿಗಳು ನಾಟಿಕೋಳಿಗಳ ಹಾಗೆ ಬೆಳೆಯುತ್ತದೆ. ಮನೆಯೊಳಗೆ ಆಹಾರ ತಿನ್ನಲು ಬಿಡಬಹುದಾಗಿದೆ.

ಈ ಹಿಂದೆ ಎಸ್‌ಸಿ, ಎಸ್‌ಟಿ, ಬಡವರಿಗೆ ಗಿರಿರಾಜ ಕೋಳಿ ವಿತರಣೆಯಾಗುತ್ತಿತ್ತು. ಇತರೆ ವರ್ಗದ ಬಡ ರೈತರಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಎಲ್ಲಾ ವರ್ಗದ ಬಡ ಜನರಿಗೆ ಉಚಿತವಾಗಿ ಗಿರಿರಾಜ ಕೋಳಿ ಮರಿ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಹೊರಗೆ ಆಹಾರ ತಿನ್ನಲು ಬಿಟ್ಟರೆ ಇವುಗಳಿಗೆ ಕಾವಲು ಅಗತ್ಯ ಇಲ್ಲವಾದರೆ ನಾಯಿ, ಮುಂಗುಸಿ, ಬೆಕ್ಕುಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ನಾಟಿ ಕೋಳಿಗಳಿಗೆ ಹೋಲಿ ಸಿದರೆ ಇವುಗಳ ಗಾತ್ರ ಹೆಚ್ಚಾಗಿರುವುದರಿಂದ ನಾಟಿ ಕೋಳಿಗಳಂತೆ ಶತ್ರುಗಳಿಂದ ತಪ್ಪಿಸಿ ಕೊಳ್ಳಲು ಕಷ್ಟ ಪಡುತ್ತವೆ. ಇವುಗಳ ಸಾಕಾಣಿಕೆ ವೇಳೆ ಎಚ್ಚರಿಕೆ ಅತ್ಯವಶ್ಯಕ.

ದಾಖಲಾತಿ ಏನೇನು?: ಆಯಾ ಜಿಪಂ ವ್ಯಾಪ್ತಿಯ ಆಸಕ್ತರಿಂದ ಆಧಾರ್‌ ಕಾರ್ಡ್‌, ಮೊಬೈಲ್‌ ನಂಬರ್‌, ಜಿಪಂ ಸದಸ್ಯರಿಂದ ಶಿಫಾರಸ್ಸು ಪತ್ರ ಬೇಕಾಗಿದೆ. ನಂತರ ಇಲಾಖೆಯಿಂದ ಹೆಸರುಗಳನ್ನು ಅಂತಿಮ ಮಾಡಲಾಗುತ್ತದೆ.

Advertisement

ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಗಿರಿರಾಜ ಕೋಳಿ ಸಾಕಣೆಗೆ ಪಶುಪಾಲನಾ ಇಲಾಖೆ ಉತ್ತೇಜನ ನೀಡುತ್ತಿದೆ. ಫಲಾನುಭವಿಗಳು ಇದರ ಅನುಕೂಲ ಸದ್ಭಳಕೆ ಮಾಡಿಕೊಳ್ಳಬೇಕು. ಕುಕ್ಕುಟೋದ್ಯಮ ಅಭಿವೃದ್ಧಿಗೆ ಇಲಾಖೆ ಸಾಕಷ್ಟು ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸುತ್ತಿದೆ.   ಬಾಲಚಂದ್ರ, ಜಿಲ್ಲಾ ಪಶುಪಾಲನಾ ಇಲಾಖೆ, ಉಪನಿರ್ದೇಶಕರು

 

 ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next